Advertisement

ರಾಷ್ಟ್ರ ಮಟ್ಟದ ಫ‌ುಟ್ಬಾಲ್ ಅಂಗಣದಲ್ಲಿ ಗಮನ ಸೆಳೆದ ಸಾಧಕ ಕಿಸು

11:51 PM Jun 20, 2019 | mahesh |

ಜೀವನದಲ್ಲಿ ಸಾಧನೆ ಮಾಡ ಬೇಕೆಂಬುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಆದರೆ ಅದನ್ನು ಈಡೇರಿಸಿಕೊಳ್ಳಲು ಅನೇಕ ಅಡೆ-ತಡೆಗಳು ಎದುರಾಗುತ್ತವೆ. ಆದರೆ, ಧೈರ್ಯ, ಪರಿಶ್ರಮ ಹಾಗೂ ಛಲದಿಂದ ಎದುರುಸಿದರೆ ಮಾತ್ರ ಗೆಲ್ಲಲು ಸಾಧ್ಯ. ಸಾಧನೆಯ ಮೂಲಕವೇ ಮಾದರಿಯಾಗಬೇಕು ಎಂದುಕೊಂಡು ಛಲ ಬಿಡದೆ ಗುರಿಯನ್ನು ಬೆನ್ನತ್ತಿದ ಪರಿಣಾಮ ಕಿಸು ಎಚ್.ಆರ್‌. ಅವರಿಂದು ರಾಷ್ಟ್ರ ಮಟ್ಟದಲ್ಲಿ ಎಲ್ಲರ ಗಮನ ಸೆಳೆದ ಆಟಗಾರರಾಗಿ ಮಿಂಚಿದ್ದಾರೆ.

Advertisement

ಸಾಮಾನ್ಯ ಕುಟುಂಬದಲ್ಲಿ ದಿ| ರಾಜು ಎಚ್.ಬಿ. ಹಾಗೂ ಗೀತಾ ದಂಪತಿಯ ಪುತ್ರನಾಗಿ ದುಬಾರೆ ಕಲ್ಲುಕೋರೆ ಪಾಲಿಬೆಟ್ಟ ಎಂಬ ಪುಟ್ಟ ಗ್ರಾಮದಲ್ಲಿ ಅವರು ಹುಟ್ಟಿ ಬೆಳೆದರು. ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾಗಲೇ ಜಾರ್ಖಾಂಡ್‌ನ‌ಲ್ಲಿ ನಡೆದ ರಾಷ್ಟ್ರ ಮಟ್ಟದ ಫ‌ುಟ್ಬಾಲ್ ಪಂದ್ಯಾವಳಿಯಲ್ಲಿ ಆಡಿದ ಹಿರಿಮೆ ಅವರದು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರ್ಣಗೊಳಿಸಿ, ಗೋಣಿಕೊಪ್ಪದ ಕಾವೇರಿ ಕಾಲೇಜಿಗೆ ಸೇರಿದರು. ಪ್ರಸ್ತುತ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಓದಿನ ಜತೆಗೇ ಕ್ರೀಡಾಭ್ಯಾಸವನ್ನೂ ಮಾಡುತ್ತಿದ್ದಾರೆ.

ಫ‌ುಟ್ಬಾಲ್ ಆಟದ ಕುರಿತು ಬಾಲ್ಯದಿಂದಲೇ ಇದ್ದ ಒಲವು ಅವರನ್ನು ಅಂಗಣಕ್ಕೆ ಸೆಳೆದಿತ್ತು. ಪೋರ್ಚುಗಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಕಿಸು ಅವರ ಮೆಚ್ಚಿನ ಆಟಗಾರ. ಪ್ರಸ್ತುತ ಅವರು ನೆಹರೂ ಫ‌ುಟ್ಬಾಲ್ ಕ್ಲಬ್‌ನ ಆಟಗಾರರಾಗಿದ್ದಾರೆ. ಉತ್ತಮ ಫಾರ್ವರ್ಡ್‌ ಆಟಗಾರರಾಗಿರುವ ಕಿಸು ಕೊಡಗು, ಬೆಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಮಂಡ್ಯ, ಕೇರಳ, ಚೆನ್ನೈ ಮುಂತಾದ ಕಡೆಗಳಲ್ಲಿ ನೀಡಿರುವ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆದಿದೆ.

ಓರ್ವ ಫ‌ುಟ್ಬಾಲ್ ಆಟಗಾರನಿಗೆ ಉತ್ತಮ ಕೈಚಳಕ, ವೇಗದ ಓಟ, ಕೌಶಲ, ಕಷ್ಣಸಹಿಷ್ಣುತೆ ಪ್ರಧಾನ ವಾಗಿರುತ್ತವೆ. ಶಿಸ್ತು, ತಾಳ್ಮೆ, ಧೈರ್ಯ, ಕರ್ತವ್ಯ ಪ್ರಜ್ಞೆ ಯನ್ನು ಮೈಗೂಡಿಸಿಕೊಂಡಿರಬೇಕು. ಎದುರಾಳಿ ಆಟಗಾರರನ್ನು ವಂಚಿಸಿ, ಚೆಂಡನ್ನು ದಾಟಿಸುವ, ಗುರಿ ತಲಸುಪಿಸುವ ಜಾಣ್ಮೆ ಇರಬೇಕು.

2017ರಲ್ಲಿ ಪಾಲಿಬೆಟ್ಟು ಎಂಬಲ್ಲಿ ನಡೆದ ಇಂಡಿಪೆಂಡೆನ್ಸ್‌ ಕಪ್‌ ಟ್ರೋಫಿಯನ್ನು ಇವರ ತಂಡ ಮುಡಿಗೇರಿಸಿಕೊಂಡಿತ್ತು. 2018ರಲ್ಲಿ ಮಂಗಳೂರಿನಲ್ಲಿ ನಡೆದ ಇಂಡಿಪೆಂಡೆನ್ಸ್‌ ಕಪ್‌ ಕೂಡ ಗೆದ್ದುಕೊಂಡಿದ್ದರು. ಇತ್ತೀಚೆಗೆ ಪಾಲಿಬೆಟ್ಟದಲ್ಲಿ ನಡೆದ ರಿಪಬ್ಲಿಕ್‌ ಕಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 2017ರಲ್ಲಿ ಕೇರಳದಲ್ಲಿ ನಡೆದ ಫ‌ುಟ್ಬಾಲ್ ಟೂರ್ನಿಯಲ್ಲಿ ಗೆಲುವು ದಾಖಲಿಸಿದ್ದು, ಈ ಪಂದ್ಯಾವಳಿಯಲ್ಲಿ ಕಿಸು ಗರಿಷ್ಠ ಗೋಲು ದಾಖಲಿಸಿದ್ದರು. ಸೋಮವಾರ ಪೇಟೆಯ ಗೌಡ್ರಳ್ಳಿಯಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಇವರ ತಂಡ ಪ್ರಶಸ್ತಿ ಗಳಿಸಿದ್ದು, ಕಿಸು ಅವರು ಅತ್ಯುತ್ತಮ ಫಾರ್ವರ್ಡ್‌ ಆಟಗಾರನೆಂಬ ಪ್ರಶಸ್ತಿ ಬಾಚಿಕೊಂಡಿದ್ದಾರೆ.

Advertisement

ಕೋಚ್ ಆಗುವ ಬಯಕೆ
ಗುರು ಇಬ್ರಾಹಿಂ ಅವರ ಮಾರ್ಗದರ್ಶನ, ಸಲಹೆಗಳು ತಮ್ಮ ಸಾಧನೆಗೆ ಪ್ರೇರಕವಾಗಿವೆ. ಹೆತ್ತವರ ಪ್ರೋತ್ಸಾಹವೂ ಕಾರಣವಾಗಿದೆ. ಫ‌ುಟ್ಬಾಲ್ ಮಾತ್ರವಲ್ಲದೆ ನೃತ್ಯ, ಸಂಗೀತ, ಲಾಂಗ್‌ ಡ್ರೈವ್‌ ಇವರಿಗೆ ತುಂಬ ಇಷ್ಟವಂತೆ. ಉತ್ತಮ ಫ‌ುಟ್ಬಾಲ್ ಕೋಚ್ ಆಗುವ ಬಯಕೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಕ್ರೀಡೆ ಒಂದು ತಪಸ್ಸು. ಅದು ಎಲ್ಲರಿಗೂ ಒಲಿಯುವುದಿಲ್ಲ. ಪ್ರೀತಿಸಿದರೆ ಮಾತ್ರ ಕ್ರೀಡೆ ನಮಗೆ ಒಲಿಯುತ್ತದೆ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ, ಮತ್ತೆ ಮತ್ತೆ ಗೆಲುವಿನ ಕಡೆಗೆ ಹೆಜ್ಜೆ ಹಾಕಬೇಕು ಎಂದು ಖಚಿತವಾಗಿ ನಂಬಿರುವ ಕಿಸು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಇರಾದೆ ಹೊಂದಿದ್ದಾರೆ. ಕಠಿನ ಪರಿಶ್ರಮದಿಂದ ಅದನ್ನು ಸಾಧ್ಯ ಮಾಡಿಕೊಳ್ಳುವತ್ತಲೂ ಮುಂದಡಿ ಇಡುತ್ತಿದ್ದಾರೆ.
-ಕೀರ್ತಿ ಪುರ, ವಿದ್ಯಾರ್ಥಿನಿ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next