ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸುದೀಪ್ ನಟನೆಯ “ಮ್ಯಾಕ್ಸ್’ (Max Movie) ಸಿನಿಮಾ ಇಷ್ಟೊತ್ತಿಗೆ ತೆರೆಕಾಣಬೇಕಿತ್ತು. ಆದರೆ, ಯಾಕೋ ಯಾವುದೂ ಅಂದುಕೊಂಡಂತೆ ಆಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಕೆಲವು ದಿನಗಳ ಹಿಂದೆ ಚಿತ್ರದ ಟೀಸರ್ ಬಿಟ್ಟಾಗ, “ಅಬ್ಬಾ ಅಂತೂ “ಮ್ಯಾಕ್ಸ್’ ಎಚ್ಚರವಾಗಿದೆ ಎಂದು ಸುದೀಪ್ (Kiccha Sudeep) ಅಭಿಮಾನಿಗಳು ಖುಷಿಪಟ್ಟರು.
ಜೊತೆಗೆ ಆಗಸ್ಟ್, ಸೆಪ್ಟೆಂಬರ್ ಅಥವಾ ಅಕ್ಟೋಬರ್… ಈ ಮೂರರಲ್ಲಿ ಒಂದು ತಿಂಗಳಲ್ಲಂತೂ ಸಿನಿಮಾ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಎದುರು ನೋಡುತ್ತಲೇ ಇದ್ದರು. ಆದರೆ, “ಮ್ಯಾಕ್ಸ್’ ಸಿನಿಮಾದ ಬಿಡುಗಡೆಯ ಕುರಿತಾದ ಯಾವುದೇ ಸೂಚನೆ ಕೂಡಾ ಕಾಣುತ್ತಿಲ್ಲ. ಹಾಗಂತ ಇದು ಸುದೀಪ್ ಅವರ ಸಮಸ್ಯೆಯಲ್ಲ. ಏಕೆಂದರೆ ಅವರೇ ಹೇಳಿದಂತೆ ಅವರ ಕಡೆಯ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿಕೊಟ್ಟಿದ್ದಾರೆ. ಆದರೆ, ತಮಿಳುನಾಡಿನ ನಿರ್ಮಾಣ ಸಂಸ್ಥೆ ಮಾತ್ರ “ಮ್ಯಾಕ್ಸ್’ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿರುವುದಂತೂ ಸುಳ್ಳಲ್ಲ. ಈ ನಡುವೆಯೇ “ಮ್ಯಾಕ್ಸ್’ ತಂಡದ ನಡುವೆ ಸಣ್ಣದಾದ ಮನಸ್ತಾಪವಿದೆ, ಸಿನಿಮಾ ಬಿಡುಗಡೆ ತಡವಾಗಲು ಹಲವು ಕಾರಣಗಳಿವೆ ಎಂಬ ಮಾತು “ಸಿನಿಪಂಡಿತರ’ ಬಾಯಲ್ಲಿ ಓಡಾಡಲಾರಂಭಿಸಿದೆ. ಆದರೆ, ಸುದೀಪ್ ಮಾತ್ರ ಇವೆಲ್ಲವನ್ನು ಅಲ್ಲಗಳೆಯುತ್ತಾರೆ.
ಇತ್ತೀಚೆಗೆ ನಡೆದ “ಬಿಗ್‌ಬಾಸ್’ ಪತ್ರಿಕಾಗೋಷ್ಠಿಯಲ್ಲಿ ಮ್ಯಾಕ್ಸ್ ಕುರಿತ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ. “ನನ್ನ ಕಡೆಯ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿಕೊಟ್ಟಿದ್ದೇನೆ. ಅದು ಬಿಟ್ಟರೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ನಿರ್ಮಾಣ ಸಂಸ್ಥೆ ತಮಿಳುನಾಡಿದು. ಅವರಿಗೆ ಅವರದ್ದೇ ಆದಂತಹ ಕೆಲವು ಸಮಸ್ಯೆಗಳಿವೆ. ನನ್ನ ಕಡೆಯಿಂದ ಏನಾಗಬೇಕೋ ಅದನ್ನು ಮುಗಿಸಿದ್ದೇನೆ. ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ ಸ್ವಲ್ಪ ತಡವಾಗುತ್ತಿದೆ. ಅದನ್ನು ಹೊರತುಪಡಿಸಿದರೆ ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಚಿತ್ರ ಮುಗಿದಿದೆ. ನಾನು ಸಹ ಈ ಚಿತ್ರಕ್ಕೆ ಪಾಲುದಾರ. ಪಾಲುದಾರರ ಮಧ್ಯೆ ಸಮಸ್ಯೆ ಇದ್ದರೆ ಚಿತ್ರ ಹೇಗೆ ಮುಗಿಯುವುದಕ್ಕೆ ಸಾಧ್ಯವಿದೆಯೇ? ಎಂದು ಪ್ರಶ್ನಿಸುತ್ತಾರೆ ಸುದೀಪ್. ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎನ್ನುವ ಸುದೀಪ್, “ಒಂದು ವೇಳೆ ನಮ್ಮ ನಡುವೆ ಸಮಸ್ಯೆಗಳಿದ್ದರೆ ಸಿನಿಮಾವನ್ನು ಒಟ್ಟಿಗೆ ನಡೆಸಿಕೊಂಡು ಬರಲು ಸಾಧ್ಯವಿಲ್ಲ. ನೆಗೆಟಿವ್ ಪ್ರಚಾರ ಕೂಡಾ ಪ್ರಚಾರವೇ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು’ ಎನ್ನುತ್ತಾರೆ.
ವಿಜಯ್ ಕಾರ್ತಿಕೇಯ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ “ಮ್ಯಾಕ್ಸ್’ ಚಿತ್ರದಲ್ಲಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಸುದೀಪ್ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.