Advertisement
ದುಃಖ ನಮಗೆ ಬದುಕಿನ ಆಳದ ದರ್ಶನ ಮಾಡಿಸುತ್ತದೆ. ಖುಷಿ ಬದುಕಿನಲ್ಲಿ ಔನ್ನತ್ಯವನ್ನು ಕಾಣಿಸುತ್ತದೆ. ದುಃಖವೆಂದರೆ ಬೇರು, ಖುಷಿಯೆಂದರೆ ರೆಂಬೆಕೊಂಬೆಗಳು. ಖುಷಿಯೆಂದರೆ ಆಕಾಶದತ್ತ ಮುಖಮಾಡಿ ಬೆಳೆಯುತ್ತಿರುವ ಮರ. ದುಃಖ ಭೂಗರ್ಭದತ್ತ ಸಾಗುವ ಈ ಮರದ ಬೇರು. ಬದುಕಿಗೆ ಇದು ಎರಡೂ ಅಗತ್ಯ. ಮರ ಎತ್ತರಕ್ಕೆ ಬೆಳೆದಷ್ಟೂ ಅದರ ಬೇರುಗಳು ಭೂಮಿಯ ಆಳಕ್ಕಿಳಿಯುತ್ತವೆ. ಎತ್ತರಕ್ಕೆ ಬೆಳೆಯುವುದು ಮತ್ತು ಆಳಕ್ಕಿಳಿಯುವುದು ಇದು ಎರಡೂ ಏಕಕಾಲದಲ್ಲಿ ನಡೆಯುವ ಸಮಾನಾಂತರ ಪ್ರಕ್ರಿಯೆಗಳು. ಇದೊಂದು ರೀತಿಯಲ್ಲಿ ಸಂತುಲನಗೊಳಿಸುವ ಕ್ರಿಯೆ. ಇದನ್ನು ಜೀವನಕ್ಕೊಮ್ಮೆ ಅನ್ವಯಿಸಿ ನೋಡಿ. ಖುಷಿಯಾಗಿರುವುದು ಅಂದರೆ ಏನು ಎನ್ನುವುದು ನಿಮಗೆ ತಿಳಿಯುತ್ತದೆ. ಹೀಗೆಂದು ಹೇಳಿದವರು ಆಚಾರ್ಯ ಓಶೋ ರಜನೀಶ್.
Related Articles
Advertisement
ಖುಷಿಯಾಗಿರಬೇಕೆಂದರೆ ನಮ್ಮ ಬಗ್ಗೆ ಇತರರು ಏನು ಹೇಳುತ್ತಾರೆ, ಏನು ಆಲೋಚಿಸುತ್ತಾರೆ ಎಂಬಿತ್ಯಾದಿ ನಕಾರಾತ್ಮಕ ಚಿಂತನೆಗಳನ್ನೆಲ್ಲ ಬಿಟ್ಟುಬಿಡಬೇಕು. ಯಾರೂ ನಿಮ್ಮ ಬಗ್ಗೆ ಏನೂ ಹೇಳುವುದಿಲ್ಲ. ಅವರು ಏನಾದರೂ ಹೇಳಿದರೆ ಅದು ಅವರ ಬಗ್ಗೆಯೇ. ಆದರೆ ಅವರ ಮಾತುಗಳು ನಿಮ್ಮನ್ನು ವಿಚಲಿತರನ್ನಾಗಿಸುತ್ತದೆ. ಏಕೆಂದರೆ ನೀವು ಅವರ ದೃಷ್ಟಿಯಲ್ಲಿ ನಿಮ್ಮನ್ನು ನೋಡುತ್ತಿದ್ದೀರಿ. ಅವರ ಅಭಿಪ್ರಾಯದಂತೆ ನೀವಿರಬೇಕು ಎಂಬ ಭ್ರಮೆಯೊಂದು ನಿಮ್ಮನ್ನು ಆವರಿಸಿದೆ. ಹೀಗಾಗಿ ಅವರೇನು ಹೇಳುತ್ತಾರೆ ಎಂಬುದಕ್ಕೆ ನೀವು ಹೆಚ್ಚಿನ ಮಹತ್ವ ಕೊಡುತ್ತೀರಿ. ನೀವು ಸದಾ ಅವರನ್ನು ಅನುಸರಿಸುತ್ತಾ ಇರುತ್ತೀರಿ, ಅವರನ್ನು ಖುಷಿಪಡಿಸುವ ಪ್ರಯತ್ನದಲ್ಲಿರುತ್ತೀರಿ. ಸದಾ ಗೌರವಾನ್ವಿತರಾಗಿರಬೇಕೆನ್ನುವುದು ನಿಮ್ಮ ಉದ್ದೇಶ. ಅಹಂನ್ನು ಅಲಂಕರಿಸುವುದರಲ್ಲೇ ನಿಮ್ಮ ಜೀವನ ಕಳೆದು ಹೋಗುತ್ತದೆ. ಅವರು ಏನು ಹೇಳುತ್ತಾರೆ ಎನ್ನುವುದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು ನಿವೇನು ಹೇಳುತ್ತೀರಿ ಎಂದು ಕೇಳಿಸಿಕೊಳ್ಳಿ. ಖುಷಿ ನಿಮ್ಮನ್ನಾವರಿಸುತ್ತದೆ.
– ಉಮೇಶ್ ಕೋಟ್ಯಾನ್