ಬೆಂಗಳೂರು: ಕೊತ್ತನೂರಿನ ಬಿಳಿಶಿವಾಲೆ ಸಮೀಪದ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಎರಡು ಗುಂಪುಗಳು ಪರಸ್ಪರ ಮಾರಕಾಸ್ತ್ರಗಳನ್ನು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ನಡೆದಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಘಟನೆಯಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊತ್ತನೂರು ಠಾಣೆ ಪೊಲೀಸರು, ಇಬ್ಬರು ಅಪ್ರಾಪ್ತರು ಸೇರಿ ಐವರನ್ನು ಬಂಧಿಸಿದ್ದಾರೆ. ಭವಿಷ್ (20), ನಿರಂಜನ್ (20) ಹಾಗೂ ಮತ್ತೂಬ್ಬ ಯುವಕನನ್ನು ಬಂಧಿಸಿ, ಇತರ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯ ಲಾಗಿದೆ. ಘಟನೆಯಲ್ಲಿ ಶಬ್ಬೀರ್ ಎಂಬುವರು ಗಾಯ ಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡ ಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹೊಡೆದಾಟ ದೃಶ್ಯ ಮೊಬೈಲ್‌ನಲ್ಲಿ ಸೆರೆ: ಎರಡು ಗುಂಪಿನ ಯುವಕರು ಪರಸ್ಪರ ಹೊಡೆದಾಡಿಕೊಂಡ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಅದು ವೈರಲ್ ಆಗುತ್ತಿದ್ದಂತೆಯೇ ಹಲವರು ಘಟನೆ ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಈ ವಿಡಿಯೋ ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ತೀರ್ಪು ಸರಿಯಾಗಿಲ್ಲ ಎಂದು ಗಲಾಟೆ: ಶಾಲಾ ಆವರಣದಲ್ಲಿ ಮಂಗಳವಾರ ಕ್ಲಸ್ಟರ್ ಮಟ್ಟದ ಖೋಖೋ ಪಂದ್ಯಾವಳಿ ಆಯೋಜಿಸಲಾಗಿತ್ತು. ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಪಂದ್ಯಾವಳಿಯ ವೀಕ್ಷಣೆಗೆ ಸುತ್ತಮುತ್ತಲಿನ ಬಡಾವಣೆ ಜನರೂ ಸೇರಿದ್ದರು. ಸಣ್ಣಪ್ಪನಹಳ್ಳಿ ಹಾಗೂ ಬಿಳಿಶಿವಾಲಿ ತಂಡಗಳ ನಡುವೆ ಖೋಖೋ ಪಂದ್ಯ ನಡೆಯುತ್ತಿತ್ತು. ಈ ವೇಳೆ ತೀರ್ಪುಗಾರರು ತಪ್ಪು ತೀರ್ಪು ನೀಡಿದ್ದಾರೆ ಎಂದು ಸೊಣ್ಣಪ್ಪನಹಳ್ಳಿಯ ವಿದ್ಯಾರ್ಥಿಗಳು ಆರೋಪಿಸಿದರು. ಆಗ ಬಂಧಿತ ಆರೋಪಿಗಳು ಅದನ್ನು ಆಕ್ಷೇಪಿಸಿ ಗಲಾಟೆ ಆರಂಭಿಸಿದರು. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ದಿಢೀರ್ ಆಗಿ ಕೆಲ ವಿದ್ಯಾರ್ಥಿಗಳು ಸೇರಿದಂತೆ ಯುವಕರು ಡ್ಯಾಗರ್ ಹಾಗೂ ಚಾಕುಗಳನ್ನು ಪ್ರದರ್ಶಿಸುತ್ತಾ ಮೈದಾನದ ಸುತ್ತ ಓಡಾಟ ನಡೆಸಿ, ಪರಸ್ಪರ ಹೊಡೆದಾಡಿ ಕೊಂಡಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಶಬ್ಬೀರ್ ಎಂಬುವರಿಗೆ ಗಾಯವಾಗಿದೆ. ಅಲ್ಲದೆ, ತೀರ್ಪುಗಾರರನ್ನು ಬೆದರಿಸಿದರು. ಅದನ್ನು ಕಂಡು ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭೀತಿಗೊಳಗಾಗಿದ್ದಾರೆ.
ಡ್ರಗ್ಸ್ ಸೇವಿಸಿ ಗಲಾಟೆ?:
ಆರೋಪಿಗಳ ವರ್ತನೆ ಗಮನಿಸಿದ ಸ್ಥಳೀಯರು, ಮಾದಕ ವಸ್ತು ಸೇವಿಸಿ ಗಲಾಟೆ ನಡೆಸಿರುವ ಸಾಧ್ಯತೆಯಿದೆ. ಇನ್ನು ಪಂದ್ಯಾವಳಿ ವೀಕ್ಷಣೆಗೆ ಬಂದಿದ್ದ ಶಬ್ಬೀರ್ ಎಂಬುವರು ಗಲಾಟೆ ಬಿಡಿಸಲು ಮುಂದಾದರು. ಆದರೆ, ಡ್ರಗ್ಸ್ ನಶೆಯಲ್ಲಿದ್ದ ಆರೋಪಿಗಳು ಶಬ್ಬೀರ್ ತಲೆಗೆ ಚಾಕುವಿನಿಂದ ಗುದ್ದಿ ಹಲ್ಲೆ ನಡೆಸಿದ್ದಾರೆ. ಅವರ ಮೊಬೈಲ್ ಸಹ ಒಡೆದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.