ಕುಂದಾಪುರ: ಬಹುತೇಕ ಮೀನುಗಾರರು ತಮ್ಮ ಇಲಾಖೆ ಕೊಡುವ ಹವಾಮಾನ ಸಂಬಂಧಿತ ಮುನ್ಸೂಚನೆಯನ್ನು ನಿರ್ಲಕ್ಷಿಸುತ್ತಿದ್ದಾರೆಯೇ ಅಥವಾ ರಿಸ್ಕ್ (ಹುಸಿ ಧೈರ್ಯ) ತೆಗೆದುಕೊಂಡು ಹೋಗುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.
Advertisement
ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸುತ್ತಿರುವುದರಿಂದಲೇ ಬೋಟ್ ಅಥವಾ ದೋಣಿಗಳ ಅವಘಡ ಹೆಚ್ಚುತ್ತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಕೊಡೇರಿಯಲ್ಲಿ ಸಂಭವಿಸಿದ ದೋಣಿ ದುರಂತದ ಬಳಿಕ ಈ ಪ್ರಶ್ನೆ ಮತ್ತೂಮ್ಮೆ ಮುನ್ನೆಲೆಗೆ ಬಂದಿದೆ.
ಕಡಲ ಅಲೆಗಳ ಅಬ್ಬರದ ಎತ್ತರ ಹಾಗೂ ಗಾಳಿಯ ವೇಗದ ತೀವ್ರತೆಯ ಕುರಿತು ಪ್ರತಿ ದಿನವೂ ದಿನ ಮುಂಚಿತವಾಗಿ ಖಾಸಗಿ ಸಂಸ್ಥೆಯೊಂದರಿಂದ ಮೀನುಗಾರರ ಮೊಬೈಲ್‌ಗೆ ಸಂದೇಶ ಬರುತ್ತದೆ. ಆ. 15ರಂದು ಮರು ದಿನದ ಮಾಹಿತಿಯನ್ನು ಕಳುಹಿಸಿದ್ದು, ಅದರಲ್ಲಿ ಗಂಗೊಳ್ಳಿ ಭಾಗದಲ್ಲಿ ಅಲೆಯಬ್ಬರ ಅಪಾಯಮಟ್ಟದಲ್ಲಿ ಇರುತ್ತದೆ ಎನ್ನುವ ಸಂದೇಶ ಬಂದಿತ್ತು.
Related Articles
ಅಲೆಗಳ ಅಬ್ಬರ 5 ಅಡಿಗಿಂತ ಜಾಸ್ತಿ ಹಾಗೂ ಗಾಳಿಯ ವೇಗ ಗಂಟೆಗೆ 20 ಕಿ.ಮೀ. ಗಿಂತ ಹೆಚ್ಚಿದ್ದರೆ ಅಪಾಯ ಎಂದು ಗೊತ್ತಿದ್ದರೂ ಕೊಡೇರಿಯಲ್ಲಿ ಮೀನುಗಾರರು ಹವಾಮಾನ ವರದಿಯನ್ನು ನಿರ್ಲಕ್ಷಿಸಿದ್ದಾರೆ. ಈ ತರಹದ ನಿರ್ಲಕ್ಷ್ಯದಿಂದಲೇ ಆಗಾಗ ಸಮುದ್ರದಲ್ಲಿ ಇಂತಹ ದುರಂತಗಳು ಮರುಕಳಿಸುತ್ತಿವೆ. ಹವಾಮಾನ ವರದಿಯು ಹೆಚ್ಚಿನ ಸಂದರ್ಭ ಶೇ. 100ರಷ್ಟು ಸತ್ಯವಾಗಿರುತ್ತದೆ. ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ ಎನ್ನುವುದು ಇಲಾಖೆಯ ಅಧಿಕಾರಿಯೊಬ್ಬರ ಅಭಿಪ್ರಾಯ.
Advertisement
ಪರಿಸ್ಥಿತಿ ಹೇಗಿತ್ತು?ಸಾಮಾನ್ಯವಾಗಿ ನಾಡದೋಣಿಗಳು ಮೀನುಗಾರಿಕೆಗೆ ತೆರಳಬೇಕಾದರೆ ಅಲೆಗಳ ಅಬ್ಬರ 5 ಅಡಿಗಿಂತ ಕಡಿಮೆ ಇರಬೇಕು. ಗರಿಷ್ಠವೆಂದರೆ 6 ಅಡಿ ಇರಬೇಕು. ಗಾಳಿಯ ವೇಗ ಗಂಟೆಗೆ 18 ಕಿ.ಮೀ. ಒಳಗೆ ಇರಬಹುದು. ದೊಡ್ಡ ಬೋಟ್ ಹೊರತುಪಡಿಸಿ, ಪರ್ಸಿನ್ ಮತ್ತಿತರ ಸಣ್ಣ ಬೋಟುಗಳು ಕೂಡ ಹೆಚ್ಚು ಕಡಿಮೆ ಇದನ್ನು ಪಾಲಿಸುತ್ತವೆ. ಆದರೆ ದುರಂತ ಸಂಭವಿಸಿದ ದಿನ ಮೀನುಗಾರಿಕೆಗೆ ತೆರಳಿದಾಗ ಅಬ್ಬರ, ಗಾಳಿಯ ವೇಗ ಕಡಿಮೆಯಿದ್ದರೂ ಅವರು ವಾಪಸ್ ಬರುವಾಗ ಅಲೆಗಳ ಅಬ್ಬರವು ತೀವ್ರವಾಗಿತ್ತು ಎನ್ನುತ್ತಾರೆ ಮೀನುಗಾರ ರಮೇಶ್ ಖಾರ್ವಿ ಕೊಡೇರಿ. ಮುನ್ನೆಚ್ಚರಿಕೆ ಕೊಟ್ಟಿರಲಿಲ್ಲ
ಮೀನುಗಾರರಿಗೆ ಆ ದಿನ ಕಡಲಿಗಿಳಿ ಯದಂತೆ ಯಾವುದೇ ಮುನ್ನೆಚ್ಚರಿಕೆ ಕೊಟ್ಟಿರಲಿಲ್ಲ. ನಮಗೆ ಹವಾಮಾನ ಇಲಾಖೆಯಿಂದ ಬಂದ ವರದಿ ಪ್ರಕಾರ ಮುನ್ನೆಚ್ಚರಿಕೆ ಕೊಡುವ ಸಂಭವ ಇರಲಿಲ್ಲ. ಆದರೂ ಮೀನುಗಾರರು ಈ ಸಮಯದಲ್ಲಿ ಸಾಧ್ಯವಾದಷ್ಟು ನೋಡಿಕೊಂಡು ಕಡಲಿ ಗಿಳಿಯುವುದು ಸೂಕ್ತ. ರಿಸ್ಕ್ ತೆಗೆದುಕೊಳ್ಳುವುದು ಸರಿಯಲ್ಲ. ಮೃತಪಟ್ಟ ಮೀನುಗಾರರಿಗೆ ಇಲಾಖೆಯ ಮಾನದಂಡದಂತೆ ದಾಖಲೆಗಳನ್ನು ಪರಿಶೀಲನೆ ನಡೆಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
– ಗಣೇಶ್ ಕೆ., ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ಉಡುಪಿ