Advertisement

ಬಿಜೆಪಿ ಹಾದಿಗೆ ಖೂಬಾ ಮುಳ್ಳು!

06:46 PM Apr 01, 2021 | Team Udayavani |

ಬೀದರ: ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಕಮಲ ಅರಳಿಸಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿಗೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರ ಬಂಡಾಯ ಈಗ ಮಗ್ಗಲು ಮುಳ್ಳಾಗಿ ಪರಿಣಮಿಸಿದೆ. ಕಮಲ ಪಾಳಯಕ್ಕೀಗ ಸಾಂಪ್ರದಾಯಿಕ ಮತಗಳ ವಿಭಜನೆಯ ಆತಂಕ ಶುರುವಾಗಿದೆ.

Advertisement

ಶಾಸಕ ದಿ|ಬಿ.ನಾರಾಯಣರಾವ್‌ ಅವರ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಸ್ಥಳೀಯರನ್ನು ಕಡೆಗಣಿಸಿ ನೆರೆ ಜಿಲ್ಲೆ ಕಲಬುರಗಿಯ
ಅಭ್ಯರ್ಥಿ ಶರಣು ಸಲಗರ ಅವರನ್ನು ಕಣಕ್ಕಿಳಿಸಿದೆ. ಪಕ್ಷದ ನಡೆಯಿಂದ ಸಿಡಿದೆದ್ದಿರುವ ಖೂಬಾ ಅವರು, ಮಂಗಳವಾರ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಸೆಡ್ಡು ಹೊಡೆದಿದ್ದು, ಇದು ಬಿಜೆಪಿಗೆ ತಲೆನೋವು ಹೆಚ್ಚಿಸುವಂತೆ ಮಾಡಿದೆ.

ಬಸವಕಲ್ಯಾಣದಲ್ಲಿ ಮಂಗಳವಾರ ಏಕಕಾಲದಲ್ಲಿ ನಡೆದ ಬಿಜೆಪಿ ಮತ್ತು ಕಾಂಗ್ರೆಸ್ ಸಮಾವೇಶ ಸಮಯದಲ್ಲೇ ಮಲ್ಲಿಕಾರ್ಜುನ ಖೂಬಾ ಅವರು ಸ್ವಾಭಿಮಾನಿ ಬಳಗದ ಮೂಲಕ “ಜನತಾ ಅದಾಲತ್‌’ ನಡೆಸಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಜೆಡಿಎಸ್‌ನಿಂದ ಎರಡು ಬಾರಿ ಶಾಸಕರಾಗಿದ್ದು, ಸಿಎಂ ಯಡಿಯೂರಪ್ಪ ಅವರ ಕೈಬಲಪಡಿಸಲು ಬಿಜೆಪಿ ಸೇರಿದ್ದೇನೆ. ಆದರೆ ಟಿಕೆಟ್‌ ನೀಡದೆ ಪಕ್ಷ ಹಾಗೂ ಸಿಎಂ ನನಗೆ ಅನ್ಯಾಯ ಮಾಡಿದ್ದಾರೆ. ಇದು ಬಸವಕಲ್ಯಾಣ ಜನರ
ಸ್ವಾಭಿಮಾನಕ್ಕೆ ಧಕ್ಕೆ ಆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಖೂಬಾ ಬಂಡಾಯದ ಬಾವುಟ ಹಾರಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿದ್ದ ಸ್ವಾಭಿಮಾನಿ
ಬಳಗದಿಂದ ಬೆಂಬಲವೂ ಸಿಕ್ಕಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಲಿಂಗಾಯತ ಸೇರಿದಂತೆ ಮೇಲ್ವರ್ಗದವರೇ ಅಧಿಕ ಸಂಖ್ಯೆಯಲ್ಲಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಬಿಜೆಪಿ ಸಹ ಈ ಸಾಂಪ್ರದಾಯಿಕ ಮತಗಳ ಮೇಲೆ ಕಣ್ಣಿಟ್ಟಿದೆ. ಈಗ ಖೂಬಾ ಅವರ ಸ್ಪರ್ಧೆಯಿಂದ ಮತ ವಿಭಜನೆ ಸಾಧ್ಯತೆ ಹೆಚ್ಚಿದೆ. ಜತೆಗೆ ಮಾಜಿ ಶಾಸಕರಾಗಿ
ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಅವರು ಎರಡನೇ ಅತಿ ಹೆಚ್ಚು ಸಂಖ್ಯೆಯ ಮತದಾರರಾಗಿರುವ ಮರಾಠಿಗರ ಮತಗಳನ್ನು ಸಹ ಒಡೆಯಬಹುದು. ಇನ್ನೊಂದೆಡೆ
ಮರಾಠಾ ಸಮಾಜದ ಮಾಜಿ ಶಾಸಕ ಎಂ.ಜಿ ಮುಳೆ ಸಹ ಎನ್‌ಸಿಪಿಯಿಂದ ಸ್ಪರ್ಧಿಸಿದ್ದಾರೆ. ಇದರಿಂದ ಸಹ ಬಿಜೆಪಿಯ ವೋಟ್‌ ಬ್ಯಾಂಕ್‌ಗೆ ದೊಡ್ಡ ಹೊಡೆತ
ಬೀಳಬಹುದೆಂದು ವಿಶ್ಲೇಷಿಸಲಾಗುತ್ತಿದೆ.

ಇನ್ನು ಬಿಜೆಪಿಯ 16 ಜನ ಟಿಕೆಟ್‌ ಆಕಾಂಕ್ಷಿಗಳಲ್ಲಿ ಬಹುತೇಕರು ತಟಸ್ಥರಾಗಿದ್ದು, ಪಕ್ಷದ ವಿರುದ್ಧ ಬೇಸರಗೊಂಡು ಸ್ವತಂತ್ರ ಅಭ್ಯರ್ಥಿ ಖೂಬಾ ಅವರಿಗೆ
ಬಾಹ್ಯ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಅತೃಪ್ತ ಆಕಾಂಕ್ಷಿಗಳನ್ನು ಮನವೊಲಿಸಿ, ಸಾಂಪ್ರದಾಯಿಕ ಮತಗಳ ವಿಭಜನೆ ಆಗದಂತೆ ಬಿಜೆಪಿ ಹೇಗೆ
ತಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರು ನಾಮಪತ್ರ ಸಲ್ಲಿಕೆ ಮುನ್ನಾದಿನ ರಾತ್ರಿ ವಸತಿ ಸಚಿವ ವಿ. ಸೋಮಣ್ಣ ಮತ್ತು ಸಚಿವ ಪ್ರಭು ಚವ್ಹಾಣ ಅವರು ನಡೆಸಿದ ಮನವೊಲಿಕೆ ಪ್ರಯತ್ನ ವಿಫಲವಾಗಿದೆ. ಅನ್ಯಾಯ ಆಗಿದೆ, ಅದನ್ನು ಮುಂದಿನ ದಿನದಲ್ಲಿ ಸರಿಪಡಿಸುವುದಾಗಿ ಸಚಿವರು ಹೇಳಿದರೂ ಸಹಮತ ವ್ಯಕ್ತಪಡಿಸದ ಖೂಬಾ ಅವರು ಪಕ್ಷೇತರರಾಗಿ ಚುನಾವಣಾ ಅಖಾಡಕ್ಕಿಳಿಯುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next