ಉಳ್ಳಾಲ: ಮಂಗಳೂರು ವಿವಿಯ ಆಶ್ರಯದಲ್ಲಿ ಕೊಣಾಜೆಯ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯ ಪುರುಷರ ಖೋ ಖೋ ಪಂದ್ಯಾಟದಲ್ಲಿ ಮೈಸೂರು ಮತ್ತು ಕುವೆಂಪು ವಿ.ವಿ. ಕ್ವಾರ್ಟರ್ ಫೈನಲ್‌ಗೇರಿದೆ. ಕಳೆದ ಬಾರಿಯ ರನ್ನರ್ ಆಪ್ ಮಂಗಳೂರು ವಿ.ವಿ. ಗುರುವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಆದಿಕವಿ ನನ್ನಯ್ಯ ವಿವಿಯನ್ನು ಎದುರಿಸಲಿದೆ.
ಗುರುವಾರ ನಡೆಯುವ ಇನ್ನುಳಿದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಕುವೆಂಪು ವಿವಿಯು ಪಾಂಡಿಚೇರಿ ವಿವಿಯನ್ನು, ಮೈಸೂರು ವಿವಿಯು ತಮಿಳುನಾಡಿನ ಭಾರತೀಯರ್ ವಿವಿಯನ್ನು, ಅಣ್ಣಾಮಲೈ ವಿವಿಯು ಕಲ್ಲಿಕೋಟೆ ವಿವಿ ತಂಡವನ್ನು ಎದುರಿಸಲಿವೆ.
ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಶಿವಮೊಗ್ಗದ ಕುವೆಂಪು ವಿವಿ ತಂಡವು ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯನ್ನು 12-9 ಅಂಕಗಳಿಂದ ಮಣಿಸಿದರೆ, ಮೈಸೂರು ವಿವಿಯು ದಾವಣಗೆರೆ ವಿವಿಯನ್ನು 14-13 ಅಂಕಗಳಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೇರಿತು. ಇನ್ನೊಂದು ಪಂದ್ಯದಲ್ಲಿ ಕಲ್ಲಿಕೋಟೆ ವಿವಿಯು ಧಾರವಾಡದ ಕರ್ನಾಟಕ್ ವಿವಿಯನ್ನು 14-12 ಅಂಕಗಳಿಂದ ಮಣಿಸಿ ಕ್ವಾರ್ಟರ್ ಫೈನಲ್‌ಗೆ ತೇರ್ಗಡೆ ಹೊಂದಿದರೆ, ಆಂಧ್ರ ಪ್ರದೇಶದ ಆದಿಕವಿ ನನ್ನಯ್ಯ ವಿವಿಯು ಮಧುರೈ ಕಾಮರಾಜ್ ವಿವಿಯನ್ನು 14-11 ಅಂಕಗಳಿಂದ ಪರಾಭವಗೊಳಿಸಿ ಕ್ವಾರ್ಟರ್ ಫೈನಲ್‌ಗೇರಿದೆ.
ಈ ಮೊದಲು ನಡೆದ ಪಂದ್ಯಗಳಲ್ಲಿ ಆಂಧ್ರಪ್ರದೇಶದ ನನ್ನಯ್ಯ ವಿವಿಯು ವಿಶಾಖಪಟ್ಟಣದ ಕೃಷ್ಣ ವಿವಿಯನ್ನು 10-8 ಅಂಕಗಳಿಂದ ಪರಾಭವಗೊಳಿಸಿತು. ಬಳಿಕ ನಡೆದ ಮಧುರೈ ಕಾಮರಾಜ್ ವಿವಿಯು ಚೆನ್ನೆçನ ಅಣ್ಣಾ ವಿವಿಯನ್ನು 17-15 ಅಂತರದಿಂದ ರೋಚಕವಾಗಿ ಕೆಡಹಿತು. ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯು ವೆಳ್ಳೂರಿನ ತಿರುವಲ್ಲುವಾರ್ ವಿವಿಯನ್ನು 10-8 ಅಂಕಗಳಿಂದ ಮಣಿಸಿತು. ಶಿವಮೊಗ್ಗದ ಕುವೆಂಪು ವಿವಿಯು ಬೆಂಗಳೂರು ವಿವಿಯನ್ನು 13-9 ಅಂಕಗಳಿಂದ ಪರಾಭವಗೊಳಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತೇರ್ಗಡೆ ಹೊಂದಿತು.