ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿನ ಅಸಮಾಧಾನದ ವಿದ್ಯಮಾನಗಳು ರಾಜ್ಯ ರಾಜಕೀಯದಲ್ಲಿ ಕೆಲ ನಾಯಕರ ಪಕ್ಷಾಂತರಕ್ಕೆ ಮುನ್ನುಡಿ ಬರೆಯುವ ಲಕ್ಷಣಗಳು ಕಂಡು ಬರುತ್ತಿವೆ. ಸಹೋದರನಿಗೆ ರಾಜ್ಯಸಭೆ ಟಿಕೆಟ್ ತಪ್ಪಿ ಬೇಸರಗೊಂಡಿರುವ ಉಮೇಶ್ ಕತ್ತಿ, ತಮಗೇ ಪರಿಷತ್ ಟಿಕೆಟ್ ತಪ್ಪಿ “ಏಕಾಂಗಿ’ಯಾಗಿರುವ ಎಚ್.ವಿಶ್ವನಾಥ್, ಪ್ರತಿರೋಧವಿ ದ್ದರೂ ನಸೀರ್‌ಅಹಮದ್‌ಗೆ ಪರಿಷತ್ ಟಿಕೆಟ್ ಕೊಟ್ಟು ತಮಗೆ ಮುಖಭಂಗ ಮಾಡಿದ್ದರಿಂದ ಕುದಿಯುತ್ತಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ರಾಜಕೀಯ ಬದಲಾವಣೆಯ ಕೇಂದ್ರ ಬಿಂದುಗಳಾಗಿದ್ದಾರೆ.
ಮೂಲತಃ ಕಾಂಗ್ರೆಸ್‌ನಲ್ಲಿ ಹಿರಿಯ ತಲೆಯಾಗಿದ್ದು ಜೆಡಿಎಸ್‌ಗೆ ಬಂದು ರಾಜ್ಯಾಧ್ಯಕ್ಷರಾದರೂ ನಗರಸಭೆ ಟಿಕೆಟ್ ಕೊಡುವ ಅಧಿಕಾರವೂ ಸಿಗಲಿಲ್ಲ ಎಂಬ ನೆಪವೊಡ್ಡಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಕೆಡವಿದ ಪ್ರಮುಖ ಪಾತ್ರದಾರಿ ಎಚ್.ವಿಶ್ವನಾಥ್ “ಘರ್‌ವಾಪ್ಸಿ’ ಚಿಂತನೆಯಲ್ಲಿದ್ದಾರೆ. ಸಿದ್ದರಾಮಯ್ಯ ವಿರೋಧಿ ಬಣದ ಕೆಲವು ಕಾಂಗ್ರೆಸ್ ನಾಯಕರು ಅದಕ್ಕೆ ಒತ್ತಾಸೆಯಾಗಿ ನಿಂತಿದ್ದಾರೆ. ಪರಿಷತ್ ಟಿಕೆಟ್ ದೊರೆಯದೆ ಆಘಾತಗೊಂಡಿರುವ ಎಚ್.ವಿಶ್ವನಾಥ್ ಅವರನ್ನು ಕೆಲ ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಕೆಎಚ್‌ಎಂಗೆ ಗಾಳ: ಮತ್ತೂಂದೆಡೆ ವಿಧಾನಪರಿಷತ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ರಮೇಶ್‌ಕುಮಾರ್ ಹಾಗೂ ನಸೀರ್ ಅಹಮದ್ ಕಾರಣ. ಇದೀಗ ನಸೀರ್ ಅಹಮದ್‌ಗೆ ಮತ್ತೆ ಟಿಕೆಟ್ ಕೊಡಿಸಿ ಜಿಲ್ಲೆಯಲ್ಲಿ ನನ್ನನ್ನು ರಾಜಕೀಯವಾಗಿ ಹಣಿಯುವ ತಂತ್ರಗಾರಿಕೆ ರೂಪಿಸಲಾಗಿದೆ. ಹೀಗಾಗಿ, ನಸೀರ್ ಅಹಮದ್‌ಗೆ ಟಿಕೆಟ್ ನೀಡಬಾರದು ಎಂದು ಕೆ.ಎಚ್.ಮುನಿಯಪ್ಪ ಅವರು ದೆಹಲಿ ಹೈಕಮಾಂಡ್ ಮಟ್ಟದಲ್ಲಿ ಸಾಕಷ್ಟು ಕಸರತ್ತು ನಡೆಸಿದರೂ ಅವರ ಮಾತಿಗೆ ಸೊಪ್ಪು ಹಾಕಿಲ್ಲ.
ಇದು ಕೆ.ಎಚ್.ಮುನಿಯಪ್ಪ ಅವರಿಗೆ ರಾಜಕೀಯವಾಗಿಯೂ ತೀವ್ರ ಹಿನ್ನೆಡೆಯುಂಟಾಗಿದೆ. ಇದರ ಸುಳಿವು ಅರಿತಿರುವ ಜೆಡಿಎಸ್ ನಾಯಕರು, ಕೆ.ಎಚ್.ಮುನಿಯಪ್ಪ ಅವರನ್ನು ಜೆಡಿಎಸ್‌ಗೆ ಸೆಳೆಯಲು ತಂತ್ರಗಾರಿಕೆ ರೂಪಿಸಿದ್ದಾರೆ. ವಿಧಾನಪರಿಷತ್ ಟಿಕೆಟ್ ಪಡೆ ದಿರುವ ಗೋವಿಂದರಾಜು, ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಅವರಿಗೆ ಕೆ.ಎಚ್.ಮುನಿಯಪ್ಪ ಅವರ ಜತೆ ಪ್ರಾರಂಭಿಕವಾಗಿ ಮಾತನಾಡುವ ಹೊಣೆಗಾರಿಕೆ ನೀಡಲಾಗಿದೆ. ಕೆ.ಎಚ್.ಮುನಿಯಪ್ಪ ಅವರನ್ನು ಜೆಡಿಎಸ್‌ಗೆ ಕರೆತರಲು ಖುದ್ದು ಎಚ್.ಡಿ.ಕುಮಾರಸ್ವಾಮಿ ಆಸಕ್ತಿ ವಹಿಸಿ ನಿರ್ದೇಶನ ನೀಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜತೆ ಉತ್ತಮ ಸಂಬಂಧ ಹೊಂದಿರುವ ಮುನಿಯಪ್ಪ ಅವರು ಜೆಡಿಎಸ್‌ಗೆ ಬಂದರೆ ಕೋಲಾರ -ಚಿಕ್ಕಬಳ್ಳಾಪುರ ಭಾಗದಲ್ಲಿ ಪಕ್ಷಕ್ಕೆ ಶಕ್ತಿ ಬರುತ್ತದೆ. ರಾಜ್ಯದ ಇತರೆಡೆ ಎಡಗೈ ಸಮುದಾ ಯದ ಬೆಂಬಲವೂ ಸಿಗಬಹುದು. ಕಾಂಗ್ರೆಸ್‌ನಲ್ಲಿ ಮೂಲೆ ಗುಂಪಾಗಿರುವುದರಿಂದ ಪ್ರಯತ್ನ ಪಟ್ಟರೆ ಬರಬಹುದು ಎಂಬ ಲೆಕ್ಕಾಚಾರ ಇವರದು ಎಂದು ಹೇಳಲಾಗಿದೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯದ ಕೋಲಾರದಲ್ಲಿ ಜೆಡಿಎಸ್‌ಗೆ ಬಂದರೆ ಕಾಂಗ್ರೆಸ್‌ಗಿಂತ ಹೆಚ್ಚು ಗೆಲ್ಲುವ ಅವಕಾಶ ಸಿಗಲಿದೆ ಎಂಬುದನ್ನು ಕೆ.ಎಚ್.ಮುನಿಯಪ್ಪ ಅವರಿಗೆ ಮನವರಿಕೆ ಮಾಡಿಕೊಡುವಂತೆ ಹಾಗೂ ಅವರು ಬಂದರೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೊಣೆಗಾರಿಕೆ ನೀಡುವುದಾಗಿಯೂ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಉಮೇಶ್ ಕತ್ತಿ ಚಿಂತೆ: ಇನ್ನು, ಸಚಿವ ಸ್ಥಾನ ಸಿಗದೆ ಬಿಜೆಪಿಯಲ್ಲಿ ಅತೃಪ್ತ ಶಾಸಕರ ನಾಯಕರಾಗಿರುವ ಉಮೇಶ್ ಕತ್ತಿ, ಟಿಕೆಟ್ ತಮ್ಮ ಸಹೋದರನಿಗೆ ಸಿಗದೆ ಮತ್ತಷ್ಟು ವ್ಯಗ್ರಗೊಂಡಿದ್ದು ಪಕ್ಷ ಬಿಡಲು ಸಜ್ಜಾಗಿದ್ದಾರೆ. ಮೊದಲಿಗೆ ಸಿದ್ಧರಾಮಯ್ಯ ಅವರ ಮೂಲಕ ಕಾಂಗ್ರೆಸ್‌ಗೆ ಹಾರಲು ಯೋಚಿಸಿದ್ದ ಕತ್ತಿ ಅವರು ಇದೀಗ ಮಾತೃಪಕ್ಷ ಜೆಡಿಎಸ್ ಯೋಚಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಜೊಲ್ಲೆ ಕುಟುಂಬ ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿದ್ದರೆ ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿ ಹೊಳಿ, ಲಕ್ಷ್ಮಿ ಹೆಬ್ಟಾಳ್ಕರ್ ನಾಯಕತ್ವ ಹೊಂದಿದ್ದಾರೆ. ಹೀಗಾಗಿ, ಜೆಡಿಎಸ್ ಅವರಿಗೆ ಕೊನೇ ಆಯ್ಕೆಯಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರ ಜತೆಯೂ ಇತ್ತೀಚೆಗೆ ಉಮೇಶ್‌ಕತ್ತಿ ಮಾತುಕತೆ ನಡೆಸಿದ್ದರು. ಒಟ್ಟಾರೆ ಡಿಸೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
* ಎಸ್. ಲಕ್ಷ್ಮಿನಾರಾಯಣ