Advertisement

ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ : ಕರ್ನಾಟಕಕ್ಕೆ ಮೂರು ಚಿನ್ನದ ಪದಕ

10:07 AM Jan 15, 2020 | sudhir |

ಗುವಾಹಾಟಿ: ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ನ ಐದನೇ ದಿನ ಕರ್ನಾಟಕ ಮೂರು ಚಿನ್ನದ ಪದಕ ಗೆದ್ದುಕೊಂಡಿದ್ದರೆ ಮಹಾರಾಷ್ಟ್ರ ನಾಲ್ಕು ಚಿನ್ನ ಗೆದ್ದು ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

Advertisement

ಸೋಮವಾರ 12 ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದ ಹರಿಯಾಣ ದ್ವಿತೀಯ ಸ್ಥಾನಕ್ಕೆ ಜಾರಿದೆ. ಕರ್ನಾಟಕ ಅಗ್ರ ಹತ್ತರೊಳಗಿನ ಸ್ಥಾನದಲ್ಲಿದೆ. ಮಂಗಳವಾರ ಕರ್ನಾಟಕ ಮೂರು ಚಿನ್ನ ಜಯಿಸಿದೆ. ಉಡುಪಿಯ ಅಭಿನ್‌ ಭಾಸ್ಕರ್‌ ದೇವಾಡಿಗ 21 ವರ್ಷ ಕೆಳಗಿನ 200 ಮೀ., ಅಖೀಲೇಶ್‌ 17 ವರ್ಷ ಕೆಳಗಿನ ಟ್ರಿಪಲ್‌ ಜಂಪ್‌ ಮತ್ತು ವಸುಂಧರಾ ವನಿತೆಯರ 21 ವರ್ಷ ಕೆಳಗಿನ ಜೂಡೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದವರು.

ಉಡುಪಿಯ ಅಭಿನ್‌, ಅಖೀಲೇಶ್‌ಗೆ ಚಿನ್ನ
ಅಭಿನ್‌ : 21 ವರ್ಷ ಕೆಳಗಿನ 200 ಮೀ. ಓಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಉಡುಪಿಯ ಅಭಿನ್‌ ಭಾಸ್ಕರ್‌ ದೇವಾಡಿಗ ಅವರು 21.33 ಸೆ.ನಲ್ಲಿ ಗುರಿ ತಲುಪಿ ಖೇಲೋ ಇಂಡಿಯಾ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.
ಎಂಜಿಎಂ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ಓದುತ್ತಿರುವ ಅವರು ಅಜ್ಜರಕಾಡಿನ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಜಹೀರ್‌ ಅಬ್ಟಾಸ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕಳೆದ ವರ್ಷದ ನವೆಂಬರ್‌ನಲ್ಲಿ ಆಂಧ್ರದ ಗುಂಟೂರಿನಲ್ಲಿ ನಡೆದ ಜೂನಿಯರ್‌ ರಾಷ್ಟ್ರೀಯ ಕೂಟದ 200 ಮೀ.ನಲ್ಲಿ ಚಿನ್ನ ಮತ್ತು 100 ಮೀ.ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು.

ಅಖೀಲೇಶ್‌: 17 ವರ್ಷ ಕೆಳಗಿನ ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಅಖೀಲೇಶ್‌ ಅವರು 14.97 ಮೀ. ಸಾಧನೆಯೊಂದಿಗೆ ಚಿನ್ನದ ಪದಕ ಜಯಿಸಿದ್ದಾರೆ. ಚಂಡೀಗಢದಲ್ಲಿ ನಡೆದ ರಾಷ್ಟ್ರೀಯ ಸ್ಕೂಲ್‌ ಗೇಮ್ಸ್‌ನ ಟ್ರಿಪಲ್‌ ಜಂಪ್‌ನಲ್ಲಿ ಕಂಚು ಜಯಿಸಿದ್ದ ಅವರು ಉಡುಪಿಯಲ್ಲಿ ನಡೆದಿದ್ದ ದಕ್ಷಿಣ ವಲಯ ಜೂನಿಯರ್‌ ಆ್ಯತ್ಲೆಟಿಕ್ಸ್‌ನ ಟ್ರಿಪಲ್‌ ಜಂಪ್‌ನಲ್ಲಿ ಕಂಚು ಪಡೆದಿದ್ದರು.

ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಆ್ಯತ್ಲೆಟಿಕ್ಸ್‌ನ ಟ್ರಿಪಲ್‌ ಜಂಪ್‌ನಲ್ಲಿ ಪ್ರಥಮ ಮತ್ತು ಉದ್ದಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next