ಬೆಂಗಳೂರು: ಕ್ರೀಡಾಪಟುಗಳಿಗೆ ಪ್ಯಾರಾ ಸೈಲಿಂಗ್ ಹಾಗೂ ಕ್ರೀಡಾಕೂಟದ ಪ್ರಚಾರದ ಏರ್ ಕ್ರಾಫ್ಟ್‌ಗಳಿಗೆ ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಚಾಲನೆ ನೀಡಿದರು.
ಸಚಿವ ಡಾ.ನಾರಾಯಣಗೌಡ ಅವರು ಸಸ್ನಾ 172 ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಪ್ರಚಾರದ ಏರ್ ಕ್ರಾಫ್ಟ್ ಗಳಿಗೆ ಚಾಲನೆ ನೀಡಿದರು.
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳಿಗಾಗಿ ಏರ್ಪಡಿಸಿರುವ ಪ್ಯಾರಾ ಸೈಲಿಂಗ್‌ಗೆ ಸಚಿವ ಡಾ.ನಾರಾಯಣಗೌಡ ಅವರು ಚಾಲನೆ ನೀಡಿದರು. ಇಂದಿನಿಂದ ಕ್ರೀಡಾಪಟುಗಳಿಗೆ ಉಚಿತವಾಗಿ ಪ್ಯಾರಾಸೈಲಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ.
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ ಪ್ರಚಾರಕ್ಕೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಕೈಜೋಡಿಸಿದೆ. ಸರ್ಕಾರಿ ವೈಮಾನಿಕ ಶಾಲೆಯ ಎರಡು ವಿಮಾನಗಳ ಮೂಲಕ ಪ್ರಚಾರ ಆರಂಭಿಸಿದೆ. ಈ ಎರಡು ವಿಮಾನ ಪ್ರತಿದಿನ ಸಿಟಿರೌಂಡ್ಸ್ ಮಾಡಲಿವೆ. ಜೈನ್ ವಿವಿ ಸೇರಿದಂತೆ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಪುಷ್ಪಾನಮನ ಸಲ್ಲಿಸಲಾಗುತ್ತದೆ. ಜೊತೆಗೆ ಸಮಾರೋಪ ಸಮಾರಂಭದ ದಿನ ವಿಮಾನದ ಮೂಲಕ ಪುಷ್ಪ ನಮನ ಸಲ್ಲಿಸಲು ಕೂಡ ಚಿಂತನೆ ನಡೆಸಲಾಗಿದೆ.