Advertisement

ಸ್ಕೇಟಿಂಗ್‌ ಹಾಕಿ ತಂಡಕ್ಕೆ ಕೀರ್ತಿ

02:02 PM May 19, 2019 | Team Udayavani |

ಕಾರವಾರ: ಕೈಗಾದ ಕೇಂದ್ರಿಯ ಶಾಲೆ ಹತ್ತನೇ ತರಗತಿ ವಿದ್ಯಾರ್ಥಿನಿ ಕೀರ್ತಿ ವೈ. ಹುಕ್ಕೇರಿ ಅಂತಾರಾಷ್ಟ್ರೀಯ ಸ್ಕೇಟಿಂಗ್‌ ರೂಲರ್‌ ಹಾಕಿ ಭಾರತ ತಂಡಕ್ಕೆ ಕರ್ನಾಟಕದಿಂದ ಆಯ್ಕೆಯಾಗಿದ್ದಾಳೆ. ಭಾರತ ತಂಡದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಕೇಟಿಂಗ್‌ ಹಾಕಿ ಆಟಗಾರ್ತಿಯಾಗಿದ್ದು, ಜೂ.27ರಿಂದ ಜು.4ರವರೆಗೆ ಸ್ಪೇನ್‌ ದೇಶದ ಬಾರ್ಸಿಲೋನಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಕೇಟಿಂಗ್‌ ರೂಲರ್‌ ಹಾಕಿ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ ಎಂದು ಕೈಗಾ ರೂಲರ್‌ ಸ್ಕೇಟಿಂಗ್‌ ಅಕಾಡೆಮಿ ತರಬೇತುದಾರ ದಿಲೀಪ್‌ ಹಣಬರ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೀರ್ತಿ ಕಳೆದ 8 ವರ್ಷಗಳಿಂದ ಸ್ಕೇಟಿಂಗ್‌ನಲ್ಲಿ ತರಬೇತಿ ಪಡೆಯುತ್ತಿದ್ದು ಹಲವು ಸಲ ಕರ್ನಾಟಕಕ್ಕೆ ಪದಕಗಳನ್ನು ತಂದು ಕೊಟ್ಟಿದ್ದಾಳೆ. ರೂಲರ್‌ ಹಾಕಿಯಲ್ಲಿ ಭಾರತ ತಂಡವನ್ನು ದೇಶದೊಳಗಿನ ಪಂದ್ಯಗಳಲ್ಲಿ ನಾಲ್ಕು ಸಲ ಪ್ರತಿನಿಧಿಸಿ, ಮೂರು ಸಲ ಕಂಚಿನ ಪದಕ ಗೆದ್ದಿದ್ದಾಳೆ. ಸ್ಕೇಟಿಂಗ್‌ ಹಾಕಿಯಲ್ಲಿ ಕೀರ್ತಿ ಹುಕ್ಕೇರಿಗೆ ಅಪಾರ ಆಸಕ್ತಿಯಿದ್ದು, ಆ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ. ಸ್ಕೇಟಿಂಗ್‌ ಹಾಕಿ ತಂಡಕ್ಕೆ ಕೈಗಾದಿಂದ ಮೂವರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಭಾರತ ತಂಡದ ಆಯ್ಕೆ ಮಹಾರಾಷ್ಟ್ರದ ನಂದೂರು ಬಾರ್‌ನಲ್ಲಿ ಏ.24ರಿಂದ ಮೇ 5ರವರೆಗೆ ನಡೆದಿತ್ತು. ಭಾರತ ತಂಡಕ್ಕಾಗಿ ನಡೆದ ಪಂದ್ಯಗಳಲ್ಲಿ ಅಪೂರ್ವ ಸಾಧನೆ ಗಮನಿಸಿದ ಆಯ್ಕೆದಾರರು ಕರ್ನಾಟಕದ ಕೈಗಾ ಸ್ಕೇಟಿಂಗ್‌ ಹಾಕಿ ಪಟುಗಳ ಪೈಕಿ ಕೀರ್ತಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಜೂ.10ರಿಂದ ಸ್ಕೇಟಿಂಗ್‌ ಹಾಕಿ ತರಬೇತಿ ಚಂಡೀಗಡದಲ್ಲಿ ನಡೆಯುತ್ತಿದ್ದು, ಅಲ್ಲಿನ ಪಂದ್ಯಗಳಿಗೆ ಕೀರ್ತಿ ಹಾಜರಾಗಲಿದ್ದಾಳೆ ಎಂದು ತರಬೇತುದಾರ ದಿಲೀಪ್‌ ಹಣಬರ ವಿವರಿಸಿದರು.

ಹಲವರ ಸಂತಸ: ಕೀರ್ತಿ ಯಲ್ಲಪ್ಪ ಹುಕ್ಕೇರಿ ಸ್ಕೇಟಿಂಗ್‌ ಹಾಕಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದಕ್ಕೆ ಕೈಗಾ ಅಣುಸ್ಥಾವರ ನಿರ್ದೇಶಕ ಸತ್ಯನಾರಾಯಣ, ಸ್ಥಾನಿಕ ನಿರ್ದೇಶಕರಾದ ಜಿ.ಪಿ. ರೆಡ್ಡಿ, ಜಿ.ಆರ್‌. ದೇಶಪಾಂಡೆ , ಕೇಂದ್ರೀಯ ಶಾಲೆಯ ಪ್ರಿನ್ಸಿಪಾಲ ಶ್ರೀನಿವಾಸರಾವ್‌, ಯಲ್ಲಪ್ಪ ಹುಕ್ಕೇರಿ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಮತ್ತು ಕೈಗಾದ ಹೆಸರು ಉತ್ತುಂಗಕ್ಕೆ ಏರಿಸುವ ನಿಟ್ಟಿನಲ್ಲಿ ಸ್ಕೇಟಿಂಗ್‌ ಪಟುಗಳು ಹೆಸರು ಮಾಡುತ್ತಲೇ ಇದ್ದಾರೆ. ಈಚೆಗೆ ಕೈಗಾ ಬಾಲಕ ಮೊಹಮ್ಮದ್‌ ಸಾಖೀಬ್‌ ಲಿಂಬೋ ಸ್ಪಿನ್ನಿಂಗ್‌ ಸ್ಕೇಟಿಂಗ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದ. ಏ.28 ರಂದು ಕಾರವಾರದಲ್ಲಿ ರೆಕಾರ್ಡ್‌ ಬುಕ್‌ ಆಫ್‌ ಇಂಡಿಯಾದ ಅಧಿಕಾರಿಗಳ ಸಮ್ಮುಖದಲ್ಲಿ ಸತತ 25 ನಿಮಿಷ 180 ಡಿಗ್ರಿಯಲ್ಲಿ ಸ್ಪಿನ್ನಿಂಗ್‌ ಮಾಡಿದ್ದ ಬಾಲಕ ಮೊಹಮ್ಮದ್‌ ಸಾಖೀಬ್‌ ಕರ್ನಾಟಕದ ಹಾಗೂ ವಿವಿಧ ದೇಶಗಳ ಸ್ಕೇಟಿಂಗ್‌ ಪಟುಗಳ ಗಮನ ಸೆಳೆದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next