Advertisement

ಖರ್ವಾ ಸರ್ಕಾರಿ ಶಾಲಾ ಯೋಗಿಗಳಿಗೆ ದೊರೆಯದ ಪ್ರೋತ್ಸಾಹ

12:43 PM Jun 16, 2019 | Team Udayavani |

ಹೊನ್ನಾವರ: ತಾಲೂಕಿನ ಹಿಂದುಳಿದ ಗ್ರಾಮಗಳಲ್ಲೊಂದಾದ ಖರ್ವಾ ನಾಥಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೆಲ್ಲಾ ಯೋಗಪಟುಗಳು. ಈ ಶಾಲೆಯಲ್ಲಿ ಕಲಿತ 20ಕ್ಕೂ ಹೆಚ್ಚು ವಿದ್ಯಾರ್ಥಿಗಳ ಯೋಗದಲ್ಲಿ ಸಾಧನೆ ಮಾಡಿ ರಾಜ್ಯ, ರಾಷ್ಟ್ರಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮತ್ತು ಮುಕ್ತ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಬಾಚಿಕೊಂಡಿದ್ದಾರೆ. ಕಳೆದ ಸಾಲಿನಲ್ಲಿ ಮಹೇಂದ್ರ ಗೌಡ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಪಡೆದ ಕರ್ನಾಟಕದ ಏಕೈಕ ಯೋಗಪಟು.

Advertisement

ಈ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರಾಜೇಶ್ವರಿ ಸ್ವತಃ ಯೋಗಪಟು. ಮಲ್ಲಾಡಿ ಹಳ್ಳಿ ರಾಘವೇಂದ್ರ ಸ್ವಾಮಿಗಳಲ್ಲಿ ಯೋಗ ತರಬೇತಿ ಪಡೆದ ಇವರು ಕಳೆದ 22ವರ್ಷಗಳಿಂದ ಯೋಗ ಸಾಧನೆ ಮಾಡುತ್ತಿದ್ದಾರೆ. ರಾಷ್ಟ್ರೀಯ ತೀರ್ಪುಗಾರರೂ ಆಗಿರುವ ಇವರು ತರಬೇತಿಗೊಳಿಸಿದ ಮಕ್ಕಳಲ್ಲಿ ಕೆಲವರು ಈಗ ಕಾಲೇಜಿಗೆ ಹೋಗುತ್ತಿದ್ದರೂ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬಡ, ಮಧ್ಯಮ, ಹಿಂದುಳಿದ ವರ್ಗದಲ್ಲಿ ಜನಿಸಿದ ಮಕ್ಕಳು ಈ ಶಾಲೆಗೆ ಬರುತ್ತಾರೆ. ಎಲ್ಲ ಮಕ್ಕಳಿಂದ ವರ್ಷಕ್ಕೊಮ್ಮೆ ಯೋಗ ಪ್ರದರ್ಶವನ್ನು ಮಾಡಿಸುವ ಶಿಕ್ಷಕಿ ಯೋಗದಲ್ಲಿ ಆಸಕ್ತಿಯಿರುವ ಮಕ್ಕಳನ್ನು ಆಯ್ದು ವಿಶೇಷ ತರಬೇತಿ ನೀಡುತ್ತಾರೆ. ಮಧ್ಯಾಹ್ನದ ಊಟವನ್ನು ಮುಚ್ಚಿಟ್ಟುಕೊಂಡು ಶಾಲೆ ಮುಗಿದ ಮೇಲೆ ಕಠಿಣ ಯೋಗಾಭ್ಯಾಸ ಮಾಡಿ ನಂತರ ಊಟ ಸೇವಿಸುವ ಮಕ್ಕಳ ಶ್ರದ್ಧೆ ಪ್ರಶಂಸನೀಯ. ದೇಶದ ವಿವಿಧ ಭಾಗದಲ್ಲಿ ನಡೆಯುವ ಯೋಗ ಸ್ಪರ್ಧೆಯಲ್ಲಿ ಸರ್ಕಾರ ನೀಡುವ ಹಣ ಸಾಲುವುದಿಲ್ಲ. ದಾನಿಗಳಿಂದ ಹಣ ಪಡದು ಶಿಕ್ಷಕಿ ಮಕ್ಕಳನ್ನು ಸ್ವತಃ ಸ್ಪರ್ಧೆಗೆ ಕರೆದುಕೊಂಡು ಹೋಗುತ್ತಾರೆ. ಊರ ಜನ, ದಾನಿಗಳು, ಮಕ್ಕಳ ಪಾಲಕರು ಮತ್ತು ಗ್ರಾಪಂದವರು, ಶಾಲೆಯ ಸಹಶಿಕ್ಷಕರು, ಮುಖ್ಯಾಧ್ಯಾಕರು ಮಕ್ಕಳ ಗೆಲುವಿಗೆ ಬೆಂಬಲ ನೀಡಿದ್ದಾರೆ ಎಂದು ರಾಜೇಶ್ವರಿ ಸ್ಮರಿಸುತ್ತಾರೆ.

ಸುಚಿತ್ರಾ ನಾಯ್ಕ, ಲತಾ ನಾಯ್ಕ, ರಘುವೀರ ನಾಯ್ಕ, ಧನ್ಯಾ ನಾಯ್ಕ, ಪ್ರಜ್ವಲ ನಾಯ್ಕ, ದೀಪ್ತಿ ನಾಯ್ಕ, ದರ್ಶನ ನಾಯ್ಕ, ಮಹೇಂದ್ರ ಗೌಡ ಮತ್ತು ತಾರಾ ಹಳ್ಳೇರ, ಪವಿತ್ರಾ ನಾಯ್ಕ ಪ್ರತಿವರ್ಷ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಪದಕ ಸಿಗಲಿ ಬಿಡಲಿ ಹಠ ಹಿಡಿದು ಮತ್ತೆ ಸ್ಪರ್ಧೆಗಿಳಿಯುತ್ತಾರೆ. ಈ ಹಳ್ಳಿಯ ಪುಟ್ಟ ಮಕ್ಕಳ ಸಾಧನೆಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಜಿಲ್ಲಾಮಟ್ಟದ ವೇದಿಕೆಗಳಲ್ಲಿ ಇವರಿಗೆ ಪ್ರದರ್ಶನದ ಅವಕಾಶವೂ ಸಿಗುತ್ತಿಲ್ಲ. ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿರುವ ಸಮಯದಲ್ಲಿ ಈ ಮಕ್ಕಳನ್ನು ಪ್ರೋತ್ಸಾಹಿಸುವ, ತರಬೇತಿ ನೀಡಿದವರನ್ನು ಗೌರವಿಸುವ ಕಾರ್ಯಕ್ರಮ ನಡೆಯಬೇಕಾಗಿದೆ. ನಮ್ಮವರನ್ನು ನಾವು ಗುರುತಿಸದಿದ್ದರೆ ಇನ್ನು ಯಾರು ಗುರುತಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next