Advertisement
ಉತ್ತರ ಕನ್ನಡಕ್ಕೆ ಸೀಮಿತವಾಗಿದ್ದ ಖಾರ್‌ಲ್ಯಾಂಡ್ ಯೋಜನೆಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಗಳಿಗೂ ಹಿಂದಿನ ಸರಕಾರ ವಿಸ್ತರಣೆ ಮಾಡಿತ್ತು. ಉಡುಪಿಯಲ್ಲಿ 11 ಹಾಗೂ ದ.ಕ. ಜಿಲ್ಲೆಯ 4 ಕಡೆಗಳಲ್ಲಿ ಈ ಯೋಜನೆಯಡಿ ಕಾಮಗಾರಿ ನಡೆಸಲು ಸ್ಥಳ ಗುರುತಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ಈ ಯೋಜನೆ ಅನುಷ್ಠಾನವಾಗುವುದರಿಂದ ಅನುದಾನದ ಕೊರತೆಯಿಲ್ಲ. ಆದರೆ ಸಿಆರ್‌ಝಡ್ ಕ್ಲಿಯರನ್ಸ್ ಸಿಗದೆ ಯೋಜನೆ ಅನುಷ್ಠಾನ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.
ಈ ಯೋಜನೆ ಅನುಷ್ಠಾನದಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಎಂಬ ಬಗ್ಗೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಯಲ್ಲೂ ಎನ್‌ಐಟಿಕೆ ಸುರತ್ಕಲ್‌ನ ತಜ್ಞ ತಂಡವು ಅಧ್ಯಯನ ನಡೆಸುತ್ತಿದೆ. ಉಡುಪಿಯ ನಿರ್ದಿಷ್ಟ ಸ್ಥಳಗಳಲ್ಲಿ ಅಧ್ಯಯನ ನಡೆಸಿದ ತಂಡ ಯೋಜನೆಯಿಂದ ಪರಿಸರಕ್ಕೆ ಹಾನಿ ಇಲ್ಲ ಎಂಬ ವರದಿ ಸಲ್ಲಿಸಿದೆ. ಸಣ್ಣ ನೀರಾವರಿ ಇಲಾಖೆಯಿಂದ ಆ ವರದಿಯನ್ನು ಪರಿಸರ ಇಲಾಖೆಗೆ ಪ್ರಸ್ತಾವನೆ ರೂಪದಲ್ಲಿ ಕಳುಹಿಸಲಾಗಿದೆ. ಪರಿಸರ ಇಲಾಖೆಯ ಜಿಲ್ಲಾ ಕಚೇರಿಯಿಂದ ಕೇಂದ್ರ ಕಚೇರಿಗೆ ವರದಿ ರವಾನೆ ಮಾಡಿ, ಅಲ್ಲಿಂದ ಅಂತಿಮ ಅನುಮತಿ ಬಂದ ಅನಂತರವೇ ಕಾಮಗಾರಿ ಆರಂಭವಾಗಲಿದೆ. ದ.ಕ.ದಲ್ಲಿ ಅಧ್ಯಯನ ನಡೆಯುತ್ತಿದ್ದು, ವರದಿ ಸಲ್ಲಿಕೆಯಾಗಿಲ್ಲ.
Related Articles
Advertisement
ಏನಿದು ಖಾರ್‌ಲ್ಯಾಂಡ್ ಯೋಜನೆ?ಸಮುದ್ರದ ಉಪ್ಪು ನೀರು ನದಿಯ ಮೂಲಕ ಕೃಷಿ ಭೂಮಿಗೆ ಹರಿಯದಂತೆ ತಡೆಯಲು ಅಣೆಕಟ್ಟು/ ಬ್ಯಾರೇಜ್ ನಿರ್ಮಾಣ ಮಾಡುವುದು ಖಾರ್‌ಲ್ಯಾಂಡ್ ಯೋಜನೆಯಾಗಿದೆ. ನದಿದಂಡೆ ಸಂರಕ್ಷಣೆಯಂತೆ ಇನ್ನಷ್ಟು ವೈಜ್ಞಾನಿಕವಾಗಿ ನದಿ ದಂಡೆಗಳ ಮೂಲಕ ಉಪ್ಪು ನೀರು ಕೃಷಿ ಭೂಮಿಗೆ ಹರಿಯದಂತೆ ತಡೆಯುವ ಗೋಡೆ ಗಳನ್ನು ಯೋಜನೆಯಡಿ ರಚಿಸಲಾಗುತ್ತದೆ. ಸಾಮಾನ್ಯವಾಗಿ ನದಿದಂಡೆ ಸಂರಕ್ಷಣೆಯನ್ನು ಸಿಹಿನೀರು ಇರುವ ಕಡೆಗಳಲ್ಲಿ ಮಾಡಲಾಗುತ್ತದೆ. ಉಪ್ಪುನೀರು ನದಿದಂಡೆಯ ಮೂಲಕ ಹೊಲ ಗದ್ದೆಗಳಿಗೆ ನುಗ್ಗದಂತೆ ತಡೆಯಲಾಗುತ್ತದೆ. ಇದರಿಂದ ನದಿ ದಂಡೆಯ ಸಂರಕ್ಷಣೆಯ ಜತೆಗೆ ಕೃಷಿ ಭೂಮಿಗೆ ಉಪ್ಪು ನೀರು ಹರಿಯದಂತೆ ಮಾಡಲಾಗುತ್ತದೆ. ಎಲ್ಲೆಲ್ಲಿ ನಡೆಯಲಿದೆ?
ಕಾಪು ತಾಲೂಕಿನ ಪಿತ್ರೋಡಿ, ಉಡುಪಿ ತಾಲೂಕಿನ ಮೂಡುತೋನ್ಸೆ, ಅಂಬಲಪಾಡಿಯ ಸಂಕೇಶದಡ್ಡಿ, ಬ್ರಹ್ಮಾವರ ತಾಲೂಕಿನ ಹಾರಾಡಿಯ ಕಂಬಳಕಟ್ಟಿ, ಕೋಡಿ ಕನ್ಯಾನ, ಕೋಡಿ ಬೆಂಗ್ರೆ ಸೀತಾನದಿಯ ಆಯ್ದಭಾಗ, ಕುಂದಾಪುರ ತಾಲೂಕಿನ ಟಿ.ಟಿ. ರಸ್ತೆಯ ಕೈಪಾಡಿ ಗರಡಿ, ಹೆಮ್ಮಾಡಿ ಗ್ರಾಮದ ಸಂತೋಷನಗರ ಬುಗರಿಕಡು, ತಲ್ಲೂರು ಗ್ರಾಮದ ಸಂಸಾಲ್‌ಕಡು, ಬೈಂದೂರು ತಾಲೂಕಿನ ಹಕ್ಲಾಡಿ ಗ್ರಾಮದ ಬಗ್ವಾಡಿ, ತ್ರಾಸಿ ಗ್ರಾಮದ ಕಲ್ಲಾನಿ ಶಾಲೆ ಹಿಂಭಾಗ, ಹೊಸಾಡು ಗ್ರಾಮದ ಅರಾಟೆ, ಮಯ್ಯಾಡಿ, ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಕಂಬಳಗದ್ದೆ, ದ.ಕ.ದ ಮಂಗಳೂರು ತಾಲೂಕಿನ ದಂಬೆಲ್ ಕಿರಿ ಸೇತುವೆ ಸಮೀಪ, ಕಣ್ಣೂರಿನಿಂದ ಬಜಾಲ್, ಉಳ್ಳಾಲ ತಾಲೂಕಿನ ಹರೇಕಳ ಕಡು, ಮೂಲ್ಕಿಯ ಹಳೆಯಂಗಡಿ ಗ್ರಾಮದ ಕರಿತೋಟ ಎಂಬಲ್ಲಿ ಕಾಮಗಾರಿಗೆ ಜಾಗ ಗುರುತಿಸಲಾಗಿದೆ. ಖಾರ್‌ಲ್ಯಾಂಡ್ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿಗೆ ಸ್ಥಳ ಗುರುತಿಸಲಾಗಿದೆ. ಸಿಆರ್‌ಝಡ್ ಕ್ಲಿಯರೆನ್ಸ್ ಅಗತ್ಯವಿದೆ. ಯೋಜನೆಯಿಂದ ಪರಿಸರದ ಮೇಲೆ ಆಗಬಹುದಾದ ಹಾನಿಯ ಬಗ್ಗೆ ಎನ್‌ಐಟಿಕೆ ತಜ್ಞರು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದ್ದಾರೆ. ಅನಂತರ ಸರಕಾರದಿಂದ ಅನುಮತಿ ಪಡೆದು ಕಾಮಗಾರಿ ಆರಂಭಿಸಲಾಗುತ್ತದೆ.
-ವಿಜಯ ಶೆಟ್ಟಿ , ಅರುಣ್ ಆರ್. ಭಂಡಾರಿ, ಎಇಇ, ಸಣ್ಣ ನೀರಾವರಿ ಇಲಾಖೆ ದ.ಕ., ಉಡುಪಿ - ರಾಜು ಖಾರ್ವಿ ಕೊಡೇರಿ