ನವಿಮುಂಬಯಿ: ಕರ್ನಾಟಕ ಸಂಘ ಖಾರ್‌ಘರ್ ನವಿ ಮುಂಬಯಿ ಇದರ 16 ನೇ ಸ್ಥಾಪನಾ ದಿನ ಹಾಗೂ 12 ನೇ ಮಹಾಸಭೆಯು ಆ. 5 ರಂದು ಸೆಕ್ಟರ್ 12, ಕೇಂದ್ರೀಯ ವಿಹಾರ್ ಹಾಲ್‌ನಲ್ಲಿ ಸಂಘದ ಅಧ್ಯಕ್ಷರಾದ ನಳಿನಾ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸ್ಥಾಪನಾ ದಿನದ ಅಂಗವಾಗಿ ಸಂಘದ ಶ್ರೀ ಲಲಿತಾ ಭಜನಾ ಮಂಡಳಿಯ ಸದಸ್ಯರು ಕಲಾ ಭಾಗÌತ್ ಅವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದರೊಂದಿಗೆ ಶ್ರಾವಣದ ಅರಸಿನ ಕುಂಕುಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ನಳಿನಾ ಪ್ರಸಾದ್, ಕಾರ್ಯದರ್ಶಿ ಚಿತ್ರಾ ರಾವ್, ಕೋಶಾಧಿಕಾರಿ ಎಸ್. ಸಿ. ಹರಕಂಗಿ, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಚಿತ್ರಾ ರಾವ್ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಹರಕಂಗಿಯವರು ಸಂಘದ 2017- 2018 ರ ವಾರ್ಷಿಕ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ನಳಿನಾ ಪ್ರಸಾದ್ ಅವರು, ಸಂಘವು ಷೋಡಶಿಯಾಗಿ ಬೆಳೆದು ನೀತಿರುವುದು ಹೆಮ್ಮೆಯ ವಿಷಯವೇ ಸರಿ. ಆದರೆ ಸಂಘವು ತನ್ನದೇ ಆದ ಕಟ್ಟಡವನ್ನು ಹೊಂದಿದ್ದಲ್ಲಿ ಸದಸ್ಯರಿಗಾಗಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇನ್ನೂ ಹೆಚ್ಚಿನ ಬೆಳವಣಿಗೆ ಸಾಧ್ಯವಾಗುವುದೆಂದೂ ಅಭಿಪ್ರಾಯ ಪಟ್ಟರು. ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಉದಾರ ಮನಸ್ಸಿನಿಂದ ತೊಡಗಿಕೊಳ್ಳಬೇಕೆಂದು ವಿನಂತಿಸಿಕೊಂಡರು.ನಂತರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ| ಉಮಾರಾವ್ ಅವರು ವಿದ್ಯಾರ್ಥಿಗಳ ವೃತ್ತಿ ಜೀವನವನ್ನು ರೂಪಿಸುವುದರಲ್ಲಿ ಪೋಷಕರ ಪಾತ್ರ ಎಂಬ ವಿಷಯವಾಗಿ ಮಾತನಾಡಿ, ತಾರುಣ್ಯವಸ್ಥೆಯಲ್ಲಿ ಮಕ್ಕಳು ಎದುರಿಸುವ ಸಮಸ್ಯೆಗಳು, ದ್ವಂದ್ವಗಳ ಬಗ್ಗೆ ಬೆಳಕು ಚೆಲ್ಲುತ್ತಾ ಪೋಷಕರು ಹಾಗೂ ಪ್ರಾಧ್ಯಾಪಕರು ಅವರ ಜೊತೆಯಾಗಿ ನಿಲ್ಲುವ, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಹಕರಿಸಿ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿಗಳ ಬಗ್ಗೆ ವಿವರವಾದ ವಿಶ್ಲೇಷಣೆ ನೀಡಿದರು.
ನಂತರ 2017-2018 ನೇ ಸಾಲಿನ ಹತ್ತು ಹಾಗೂ ಹನ್ನೆರಡನೆಯ ತರಗತಿಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಶಶಿಧರ್ ರಾವ್ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷೆ ಮೈಥಿಲಿ ಪ್ರಸಾದ್ ವಂದಿಸಿದರು. ಡಾ| ವಿಮಲಾ ಜೆ. ಪಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.