Advertisement

ಖಾರ್‌ಘರ್‌ ಕರ್ನಾಟಕ ಸಂಘ: 16ನೇ ವಾರ್ಷಿಕೋತ್ಸವ

01:56 PM Feb 05, 2019 | Team Udayavani |

ನವಿಮುಂಬಯಿ: ಖಾರ್‌ಘರ್‌  ಕರ್ನಾಟಕ ಸಂಘದ 16ನೇ ವಾರ್ಷಿಕೋತ್ಸವ ಸಂಭ್ರಮವು ಜ. 20ರಂದು ಐಟಿಂ  ಕಾಲೇಜು ಸಭಾಗೃಹದಲ್ಲಿ ಎಸ್‌. ನಳಿನಾ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ   ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕಾರ್ಯಕ್ರಮದ ಮೊದಲಿಗೆ ಕಲಾ ಭಾಗವತ್‌ ಅವರ ನೇತೃತ್ವದಲ್ಲಿ ಶ್ರೀ ಲಲಿತಾ ಭಜನಾ ಮಂಡಲಿಯವರಿಂದ ಲಲಿತಾ ಸಹಸ್ರನಾಮ ಪಠನ ನಡೆಯಿತು.  ಸಭಾ ಕಾರ್ಯಕ್ರಮದಲ್ಲಿ ಮೈಸೂರು ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷೆ  ಕೆ. ಕಮಲಾ ಅವರು ಮುಖ್ಯ ಅತಿಥಿಯಾಗಿ ಹಾಗೂ ಗೌರವ ಅತಿಥಿಯಾಗಿ ಖ್ಯಾತ ಹೊಟೇಲ್‌ ಉದ್ಯಮಿ  ಆದರ್ಶ್‌ ಶೆಟ್ಟಿ ಹಾಲಾಡಿ ಅವರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಚಿತ್ರಾ ರಾವ್‌, ಸಂಘದ ಉಪಾಧ್ಯಕ್ಷೆ ಮೈಥಿಲಿ ಪ್ರಸಾದ್‌ ಭಟ್‌, ಸಂಘದ ಕೋಶಾಧಿಕಾರಿ ಶೈಲೇಶ್‌ ಹರಕಂಗಿಯವರು ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆ. ಕಮಲಾ ಅವರು,  ಜೀವನದಲ್ಲಿ ಮತ್ತು ಸಂಘದ ಬೆಳವಣಿಗೆಗಾಗಲೀ ಆರ್ಥಿಕ ಸಬಲೀ ಕರಣದ ಅಗತ್ಯವಿದೆ.  ಜತೆಗೆ  ಯುವಕರನ್ನು  ಸಂಘದ ಚಟುವಟಿ ಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸುವುದರ ಮೂಲಕ  ಮುಂದಿನ ಪೀಳಿಗೆಯನ್ನು ಸಿದ್ಧಗೊಳಿಸಲು ಸಾಧ್ಯವಿದೆ ಎಂದು ನುಡಿದು,   ಸಮಾಜ ಸೇವೆಯ ಮಹತ್ವದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು.

ಅನಂತರ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷೆ ಎಸ್‌. ನಳಿನಾ ಪ್ರಸಾದ್‌, ಸಂಘದ ಸರ್ವತೋ ಮುಖ ಬೆಳವಣಿಗೆಗಾಗಿ ಕಾರ್ಯಕಾರಿ ಸಮಿತಿಯ ಬಳಿ ಹತ್ತು ಹಲವು ಯೋಜನೆಗಳು ಇದ್ದರೂ ಸಹ ತಮ್ಮದೇ ಆದ ಕಟ್ಟಡ ಹಾಗೂ ಸ್ಥಳ ಇಲ್ಲದ ಕಾರಣ ನಿಗದಿತ ಕಾರ್ಯಕ್ರಮಗಳ ಹೊರತಾಗಿ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿಲ್ಲ. ಸಂಘ ಮುಂಬರುವ ವರ್ಷದಲ್ಲಿ ಕನ್ನಡ ಕಲಿಕಾ ತರಗತಿಯನ್ನು ಆರಂಭಿಸುವ ಉದ್ದೇಶ ಹೊಂದಿದ್ದು ಈ ನಿಟ್ಟಿನಲ್ಲಿ ಸದಸ್ಯರ ಸಹಕಾರ ಕೋರಿದರು.

ಸಂಘದ ವಾರ್ಷಿಕ ವರದಿಯನ್ನು ಚಿತ್ರಾ ರಾವ್‌ ಓದಿದರು. ಸುಧಾರಾಮ ರಾವ್‌ ಅವರು ಪ್ರಾರ್ಥನೆಗೈದರು. ಸಂಘದ ಜತೆ ಕಾರ್ಯದರ್ಶಿ ಡಾ| ಜಿ. ಪಿ. ವಿಮಲಾ ಅತಿಥಿಗಳನ್ನು ಸ್ವಾಗತಿಸಿದರು. ಕೋಶಾಧಿಕಾರಿ ಹರಕಂಗಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯೆ ಸುಮತಿ ಅರುಣ್‌ ಅತಿಥಿಗಳನ್ನು  ಪರಿಚಯಿಸಿದರು. ಸಭೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸದಸ್ಯರು ಹಾಗೂ ಅವರ ಮಕ್ಕಳಿಗೆ ಬಹುಮಾನ ನೀಡಲಾಯಿತು.

Advertisement

ಬಹುಮಾನ ವಿಜೇತರ  ಪಟ್ಟಿಯನ್ನು ಸಂಘದ ಸದಸ್ಯರಾದ ಡಾ| ಎಂ. ಎಸ್‌. ನಾಗೇಶ್‌ ಅವರು ವಾಚಿಸಿದರು. ಮಧುಸೂದನ್‌ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಅನಂತರ ಸದಸ್ಯರಾದ ಶಶಿಧರ ರಾವ್‌,  ನಾಗರಾಜ ಗಾಣಿಗ,  ಜ್ಯೋತಿ ದೇವರು, ಆಶಾ ಪೂಜಾರಿಯವರ ಮೇಲ್ವಿಚಾರಣೆಯಲ್ಲಿ  ಸಂಘದ ಸದಸ್ಯರಿಂದ ವಿವಿಧ ವಿನೋದಾವಳಿಗಳನ್ನು ಏರ್ಪಡಿಸಲಾಗಿತ್ತು.

ಪ್ರಮುಖ ಆಕರ್ಷಣೆಯಾಗಿ ಸತೀಶ್‌ ಎರ್ಮಾಳ್‌ ಅವರಿಂದ ತುಳುವಿನಲ್ಲಿ ರಚಿತವಾದ,    ಅನಿಲ್‌ ಕುಮಾರ್‌ ಹೆಗ್ಗಡೆಯವರಿಂದ ಕನ್ನಡದಲ್ಲಿ ಭಾಷಾಂತರಗೊಂಡು, ನಿರ್ದೇಶಿಸಲ್ಪಟ್ಟ  “ಯಾರಿಗೂ ಹೇಳ್ಬೇಡಿ’ ನಾಟಕ ಪ್ರದರ್ಶನಗೊಂಡಿತು.  ವಿ. ಕೆ. ಸುವರ್ಣ, ಶೈಲೇಶ್‌ ಪುತ್ರನ್‌,  ನಳಿನಾ ಪ್ರಸಾದ್‌, ಚಿತ್ರಾ ರಾವ್‌, ರಶ್ಮಿ ಭಟ್‌,  ಹರಕಂಗಿ,  ಮಧುಸೂದನ್‌,  ನಾಗರಾಜ್‌ ಗಾಣಿಗ ಅವರು ಮುಖ್ಯಪಾತ್ರದಲ್ಲಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next