ಹೊಸದಿಲ್ಲಿ: ಬಿಜೆಪಿಯನ್ನು ಅಧಿಕಾ ರದಿಂದ ಕೆಳಗಿಳಿಸುವ ಉದ್ದೇಶದಿಂದ ರಚನೆಯಾದ ಇಂಡಿಯಾ ಮೈತ್ರಿ ಕೂಟದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆದರೂ ಧೃತಿಗೆಡದೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ಮಿತ್ರ ಪಕ್ಷಗಳನ್ನು ಒಗ್ಗಟ್ಟಾಗಿ ತೆಗೆದುಕೊಂಡು ಈ ಬಾರಿ ಯ ಚುನಾವಣೆಯಲ್ಲಿ 232 ಸ್ಥಾನ ಗಳನ್ನು ಗೆಲ್ಲಿಸಿದ್ದಾರೆ.
ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಈ ಒಕ್ಕೂಟ 1 ತಿಂಗಳ ಕಾಲವೂ ಒಟ್ಟಿಗಿರುವುದಿಲ್ಲ ಎಂದು ಬಿಜೆಪಿ ನಾಯಕರು ಮೂದಲಿಸಿದ್ದರು. ಮೈತ್ರಿಕೂಟದಲ್ಲಿದ್ದ ಕೆಲವು ನಾಯಕರೇ ಚುನಾವಣೆಗೂ ಮುನ್ನ ಕೂಟವನ್ನು ತೊರೆದರು. ಇದ್ಯಾವುದನ್ನೂ ಲೆಕ್ಕಿಸದೇ ಒಗ್ಗಟ್ಟು ಕಾಪಾಡಿಕೊಳ್ಳುವಲ್ಲಿ ಖರ್ಗೆ ಯಶಸ್ವಿಯಾದರು.
ಕಾಂಗ್ರೆಸ್ ಅತೀದೊಡ್ಡ ಪಕ್ಷ ಎಂಬ ಪ್ರತಿಷ್ಠೆಯನ್ನು ಬದಿಗಿಟ್ಟು ಎಲ್ಲ ಮಿತ್ರಪಕ್ಷಗಳ ಮಾತನ್ನು ಕೇಳಿ ಖರ್ಗೆ ಸೀಟು ಹಂಚಿಕೆ ನಡೆಸಿದರು.
ಮಿತ್ರ ಪಕ್ಷಗಳು ಗೆಲ್ಲಬಲ್ಲವು ಎನಿಸಿದ ಸ್ಥಾನ ಗಳನ್ನು ಮುಲಾಜಿಲ್ಲದೇ ಅವ ರಿಗೆ ಬಿಟ್ಟು ಕೊಟ್ಟರು. ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸದೇ, ಚುನಾ ವಣೆಯ ಬಳಿಕ ಇದನ್ನು ಮಿತ್ರಪಕ್ಷಗಳು ಒಟ್ಟಾಗಿ ಘೋಷಿಸುತ್ತವೆ ಎಂದು ಹೇಳುವ ಮೂಲಕ ಒಗ್ಗಟ್ಟನ್ನು ಕಾಪಾ ಡಿಕೊಂಡರು.
ದೀರ್ಘಕಾಲ ದೇಶ ಆಳಿದ್ದ ಪಕ್ಷವೊಂದು ಇದೇ ಮೊದಲ ಬಾರಿಗೆ ಅತಿ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ ಎಂದು ಪ್ರಧಾನಿ ಮೋದಿಯಾದಿಯಾಗಿ ಬಿಜೆಪಿಯ ಅನೇಕರು ವ್ಯಂಗ್ಯವಾಡಿದರು. ಆದರೆ ಅದ್ಯಾವುದರ ಬಗ್ಗೆಯೂ ಖರ್ಗೆ ತಲೆಕೆಡಿಸಿಕೊಳ್ಳದೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು “ಗೆಲ್ಲುವುದೊಂದೇ ಗುರಿ’ ಎಂಬ ಶಪಥದೊಂದಿಗೆ ಮುನ್ನಡೆದರು. ಆ ನಡೆಯೇ ಇಂದಿನ ಈ ಫಲಿತಾಂಶಕ್ಕೆ ಕಾರಣ.