ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಬಿರುಗಾಳಿ ಎದ್ದಿದ್ದು, ಹಲವರು ಬಹಿರಂಗವಾಗಿ ಬೇಸರ ಹೊರ ಹಾಕಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಿದೇ ಇರುವುದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಲು ದಿನೇಶ್ ಗುಂಡೂರಾವ್ ಮತ್ತು ಡಾ.ಜಿ.ಪರಮೇಶ್ವರ್ ಅವರ ಬಳಿ ಹೇಳಿದ್ದೆ . ಆದರೆ ಅದನ್ನು ಪರಿಗಣಿಸಿಲ್ಲ ಎಂದು ಬೇಸರ ಹೊರ ಹಾಕಿದರು.
ನಾವು ನಮ್ಮ ಪ್ರತಿನಿಧಿತ್ವ ಕೇಳುತ್ತೇವೆ.ಪ್ರಯತ್ನ ಮಾಡಿದ್ರೂ ಫಲ ನೀಡಲಿಲ್ಲ. ಪ್ರಯತ್ನಕ್ಕೆ ಫಲ ಸಿಗದೆ ಇದ್ದಾಗ ಜನರ ದೂಷಣೆ ನಮ್ಮ ಮೇಲೆ ಬರುತ್ತದೆ ಎಂದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ ಜೇವರ್ಗಿ ಕ್ಷೇತ್ರದ ಶಾಸಕ ಡಾ| ಅಜಯ್ ಸಿಂಗ್ ಅವರಿಗೆ ಸ್ಥಾನ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಶನಿವಾರ ಜೇವರ್ಗಿ ಪಟ್ಟಣದಲ್ಲಿ ಏಕಾಏಕಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.
ಚಿಂಚೋಳಿ ಮೀಸಲು ವಿಧಾನಸಭೆ ಕ್ಷೇತ್ರದಿಂದ ಎರಡನೇ ಸಲ ಆಯ್ಕೆಗೊಂಡಿರುವ ಶಾಸಕ ಡಾ.ಉಮೇಶ ಜಾಧವ್ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದಕ್ಕೂ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.
ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾರೆ.