Advertisement

ಖರ್ಗೆ ಸಿಎಂ ಆಗಲು ವಿರೋಧಿಸಿರಲಿಲ್ಲ

11:23 PM Nov 12, 2019 | Team Udayavani |

ವಿಜಯಪುರ: ಸಮ್ಮಿಶ್ರ ಸರ್ಕಾರ ರಚಿಸುವಾಗ ಖರ್ಗೆಗೆ ಸಿಎಂ ಸ್ಥಾನ ನೀಡಲು ನಾನು ವಿರೋಧಿಸಿರಲಿಲ್ಲ. ದೇವೇಗೌಡರು ಏಕೆ ಹಾಗೆ ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ನಗರದಲ್ಲಿ ನಡೆದ ಕಾಂಗ್ರೆಸ್‌ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ರಚಿಸುವಾಗ ಖರ್ಗೆಗೆ ಸಿಎಂ ಸ್ಥಾನ ನೀಡಲು ನಾನು ವಿರೋಧಿಸಿರಲಿಲ್ಲ. ದೇವೇಗೌಡರು ಏಕೆ ಹಾಗೆ ಹೇಳುತ್ತಿದ್ದಾರೋ ಗೊತ್ತಿಲ್ಲ.

Advertisement

ಸಮ್ಮಿಶ್ರ ಸರ್ಕಾರದ ಬಗ್ಗೆ ಒಪ್ಪಂದ ಮಾಡಿಕೊಳ್ಳುವಾಗ ನಾನು ಆ ಸಭೆಯಲ್ಲಿ ಇರಲಿಲ್ಲ. ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಜೊತೆ ಸರ್ಕಾರ ರಚನೆಗೆ ಒಪ್ಪಿದ್ದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನ ಗೆಲ್ಲುತ್ತದೆ ಎಂದು ನಾನು ಹೇಳಿಲ್ಲ, 12 ಸ್ಥಾನ ಗೆಲ್ಲುವುದಾಗಿ ಹೇಳಿದ್ದೇನೆ. ಆದರೆ, ದೇವೇಗೌಡರು ಏಕೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿ ಜತೆ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿರುವ ಶಂಕೆ ಇದೆ ಎಂದರು.

ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪಟ್ಟಿ ಮಾಡಿದ್ದು, ಬಾಕಿ ಉಳಿದಿರುವ 7 ಕ್ಷೇತ್ರಗಳಿಗೆ ಶೀಘ್ರದಲ್ಲಿಯೇ ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಯಾವುದೇ ಮುಖಂಡರೊಂದಿಗೆ ಮನಸ್ತಾಪ ಉಂಟಾಗಿಲ್ಲ. ಮಾಧ್ಯಮಗಳಲ್ಲಿ ಬಂದ ಸುದ್ದಿ ಶುದ್ಧ ಸುಳ್ಳು. ನಾವು “ಆಪರೇಷನ್‌ ಹಸ್ತ’ ಮಾಡಲ್ಲ. ಸಚಿವ ಸಿ.ಟಿ.ರವಿಯವರು ಮೊದಲು ಬಿಜೆಪಿ ಬಿಟ್ಟು ಬರುವವರನ್ನು ತಡೆಯಲಿ. ಬಿಜೆಪಿ ಬಳಿ ದುಡ್ಡಿದೆ, ಹೀಗಾಗಿ, ಅನೈತಿಕ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಮತ್ತೆ ನಾನೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ ಜನ: “ನಾನು ರಾಜ್ಯಾದ್ಯಂತ ಪ್ರವಾಸ ಮಾಡುವಾಗ ಜನರೇ ರಾಜ್ಯದ ಬಿಜೆಪಿ ಸರ್ಕಾರದ ಬಗ್ಗೆ ಟೀಕಿಸುತ್ತಿರುವುದು ಕಂಡು ಬರುತ್ತಿದೆ. ಯಾವ ನಿಬಂಧನೆ ಇಲ್ಲದೇ ರೈತರು ಮಾಡಿದ 50 ಸಾವಿರ ರೂ.ವರೆಗಿನ ಸಹಕಾರಿ ಸಾಲ ಮನ್ನಾ ಮಾಡಿದ್ದೀರಿ. ಹೀಗಾಗಿ, ಮತ್ತೆ ಕಾಂಗ್ರೆಸ್‌ ಗೆದ್ದು ನೀವು ಸಿಎಂ ಆಗಬೇಕು ಎನ್ನುತ್ತಿದ್ದಾರೆ’ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನ ಲೆಕ್ಕದಲ್ಲಿ ಬಿಜೆಪಿ ಗೆದ್ದಿದ್ದರೂ ಶೇಕಡಾವಾರು ಮತ ಪಡೆಯುವಲ್ಲಿ ಕಾಂಗ್ರೆಸ್‌ ಅಗ್ರಸ್ಥಾನದಲ್ಲಿದೆ. ಆದರೂ, ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರಕ್ಕೇರಿದೆ ಎಂದು ಆರೋಪಿಸಿದರು. ನನ್ನ ಸರ್ಕಾರಕ್ಕೆ ನೂರು ದಿನ ತುಂಬಿದಾಗ ಕರ್ನಾಟಕದ ಚಿತ್ರಣವನ್ನೇ ಬದಲಾವಣೆ ಮಾಡುತ್ತೇನೆ ಎಂದಿದ್ದ ಸಿಎಂ ಯಡಿಯೂರಪ್ಪ, ಏನೇನು ಬದಲಾವಣೆ ಮಾಡಿದ್ದಾರೆ. ಟಿಪ್ಪು ಜಯಂತಿ ನಿಲ್ಲಿಸಿದ್ದೇ ಇವರ ಸಾಧನೆ ಎಂದರು.

Advertisement

ಸುಳ್ಳು ಹೇಳುತ್ತಿರುವ ಬಿಎಸ್‌ವೈ: ರಾಜ್ಯದಲ್ಲಿ ಯಾರೂ ಹಸಿದಿರಬಾರದು ಎಂದು ರಾಜ್ಯದಲ್ಲಿ ನನ್ನ ಸರ್ಕಾರ ಅ ಧಿಕಾರದಲ್ಲಿದ್ದಾಗ ಬಡವರಿಗೆ ಅಕ್ಕಿ, ಗೋಧಿ ನೀಡಿದೆ. ಆದರೆ, ಮೋದಿ ಸರ್ಕಾರ ಅಕ್ಕಿ ಕೊಟ್ಟಿದ್ದು ಎಂದು ಯಡಿಯೂರಪ್ಪ ಸುಳ್ಳು ಹೇಳಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಎಲ್ಲೆಲ್ಲಿ ಅಕ್ಕಿ-ಜೋಳ ಕೊಟ್ಟಿದ್ದೀರಿ ತೋರಿಸಿ ಎಂದರು.

ಬಿಜೆಪಿ ಸರ್ವಾಧಿಕಾರಿ ಧೋರಣೆ: ದಿನೇಶ್‌
ದೇವದುರ್ಗ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಿ, ಸಮಯ ನಿಗದಿ ಮಾಡಿದ್ದರೂ ಏಕಾಏಕಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಲಾಗಿದೆ. ದೇಶದಲ್ಲಿ ಯಾವ ಸ್ಥಿತಿ ನಿರ್ಮಾಣವಾಗಿದೆ ಎಂಬುದಕ್ಕೆ ಇದು ನಿದರ್ಶನ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಧೋರಣೆ ಆಡಳಿತ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಸರ್ವಾಧಿ ಕಾರಿ ಧೋರಣೆ ಆಡಳಿತ ನಡೆಸುತ್ತಿರುವ ಪರಿಣಾಮ ಕೆಲ ಸಂಸ್ಥೆಗಳು ಸರ್ಕಾರದ ಕೈವಶವಾಗಿವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ದೇಶ ಹೀನಾಯ ಸ್ಥಿತಿಗೆ ಬಂದಿದೆ. ಆರ್ಥಿಕ ತಜ್ಞರ ಸಲಹೆ ಪಡೆಯದೆ ನೋಟ್‌ ಬ್ಯಾನ್‌ ಮಾಡಿದ್ದರಿಂದ ಆರ್ಥಿಕ ಹಿಂಜರಿತ ಹೆಚ್ಚಿದೆ. ಜಿಎಸ್‌ಟಿ ಜಾರಿಯಿಂದಾಗಿ ಕೈಗಾರಿಕೆ, ಕೃಷಿ, ವ್ಯಾಪಾರ ವಹಿವಾಟಿಗೆ ಹಿನ್ನಡೆ ಆಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ ಎಂದರು.

ವಾಮ ಮಾರ್ಗದ ಮೂಲಕ ಸರ್ಕಾರ ರಚಿಸಿದ ಯಡಿಯೂರಪ್ಪ ಬಿಜೆಪಿ ಶಾಸಕರಿರುವ ಕ್ಷೇತ್ರಕ್ಕೆ ಅನುದಾನ ನೀಡದೆ ಅನರ್ಹ ಶಾಸಕರ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ನೀಡುತ್ತಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಗುಂಪುಗಾರಿಕೆ ಶುರುವಾಗಿದೆ. ಸಿಎಂ ಬಗ್ಗೆ ಕೇಂದ್ರ ಮತ್ತು ರಾಜ್ಯ ನಾಯಕರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಹೀಗಾಗಿ ಕೋರ್‌ ಕಮಿಟಿ ಸಭೆಯಲ್ಲಿನ ವಿಚಾರಗಳನ್ನು ಆಡಿಯೋ ಮಾಡಿ ಹರಿಬಿಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚನೆಯಂತೆ ಆಪರೇಷನ್‌ ಕಮಲ ಮಾಡಲಾಗಿದೆ ಎಂಬುದಕ್ಕೆ ಆಡಿಯೋ ಸಾಕ್ಷಿಯಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next