ಕೋವಿಡ್ ಅಬ್ಬರವಿರದಿದ್ದರೆ, ಇಷ್ಟೊತ್ತಿಗಾಗಲೇ ನಟ ಧ್ರುವ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ “ಪೊಗರು’ ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೋವಿಡ್ ದಿಂದಾದ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಬಂದ್ ಅಗಿದ್ದರಿಂದ, ಅದರ ಪರಿಣಾಮ “ಪೊಗರು’ ಚಿತ್ರದ ಮೇಲೂ ಆಗಿದೆ. ಇನ್ನು ಈಗಾಗಲೇ ಬಹುತೇಕ “ಪೊಗರು’ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಬಾಕಿಯಿರುವ ಎರಡು ಹಾಡು ಮತ್ತು ಚಿತ್ರದ ಒಂದಷ್ಟು ಭಾಗದ ಶೂಟಿಂಗ್ ಮುಗಿಸಿಕೊಂಡರೆ, ಇಡೀ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಲಿದೆ. ಇದರ ನಡುವೆಯೇ, ತನ್ನ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿದ್ದ “ಪೊಗರು’ ಚಿತ್ರತಂಡ, ಕೋವಿಡ್ ಲಾಕ್‌ಡೌನ್ ನಡುವೆಯೇ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಗೊಳಿಸಿತ್ತು.
“ಖರಾಬು’ ಅನ್ನೋ ಈ ಟೈಟಲ್ ಸಾಂಗ್ ಬಿಡುಗಡೆಯಾಗುತ್ತಿದ್ದಂತೆ, ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡಲು ಶುರು ಮಾಡಿತ್ತು. ಕನ್ನಡದಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿರುವ “ಪೊಗರು’ ಹಾಡು 90 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. “ಖರಾಬು’ ಟೈಟಲ್ ಹಾಡು ಮಾಸ್ ಆಡಿಯನ್ಸ್ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಒಂದಷ್ಟು ಸಿನಿ ಪ್ರಿಯರ ಬಾಯಲ್ಲಿ ಗುನುಗುಡುತ್ತಿದೆ.
ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡುತ್ತಿರುವ “ಖರಾಬು’ ಹಾಡನ್ನು ತೆಲುಗಿಗೂ ತಲುಪಿಸುವ ಕೆಲಸಕ್ಕೆ ಈಗ ಚಿತ್ರತಂಡ ಕೈ ಹಾಕಿದೆ. ಹೌದು. ಈ ಹಿಂದೆ ಸುದ್ದಿಯಾದಂತೆ, “ಪೊಗರು’ ಕನ್ನಡದ ಜೊತೆಜೊತೆಗೆ ತೆಲುಗಿನಲ್ಲೂ ತೆರೆಕಾಣುತ್ತಿದೆ. ಅದಕ್ಕಾಗಿ ಚಿತ್ರತಂಡ ಕನ್ನಡದ ಜೊತೆಗೆ ತೆಲುಗಿನಲ್ಲೂ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದೆ. ಸದ್ಯ ಕನ್ನಡದಲ್ಲಿ ಬಿಡುಗಡೆಯಾಗಿ ಬಾರಿ ಮೆಚ್ಚುಗೆ ಪಡೆದುಕೊಂಡಿರುವ “ಖರಾಬು…’ ಹಾಡನ್ನು ಚಿತ್ರತಂಡ, ತೆಲುಗಿನಲ್ಲೂ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಇದೇ ಆಗಸ್ಟ್ 6ರಂದು ಈ ಹಾಡಿನ ತೆಲುಗು ಅವತರಣಿಕೆಯನ್ನು ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.
“ಖರಾಬು’ ಹಾಡಿಗೆ ಕನ್ನಡದಲ್ಲಿ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಧ್ವನಿಯನ್ನು ಸಹ ನೀಡಿದ್ದರು. ಇನ್ನು ತೆಲುಗಿನಲ್ಲಿ ಈ ಹಾಡಿಗೆ ಭಾಸ್ಕರ್ ಬಾಟ್ಲಾ, ರವಿ ಕುಮಾರ್ ಸಾಹಿತ್ಯ
ರಚಿಸಿದ್ದಾರೆ. “ಅಲಾ ವೈಕುಂಠಪುರಂಲೋ’ ಚಿತ್ರ ಖ್ಯಾತಿಯ “ರಾಮುಲೋ ರಾಮುಲೊ…’ ಹಾಡಿಗೆ ಧ್ವನಿ ನೀಡಿದ್ದ ಅನುರಾಗ್ ಸಿಂಗ್ ಈ ಹಾಡಿಗೂ ಧ್ವನಿ ನೀಡಿದ್ದಾರೆ. ಇನ್ನು ಕನ್ನಡದಂತೆಯೇ ತೆಲುಗಿನಲ್ಲಿಯೂ “ಪೊಗರು’ ಒಂದಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಅದಕ್ಕೆ ಮುಖ್ಯ ಕಾರಣ ನಾಯಕ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ, “ಪೊಗರು’ ಮೂಲಕ
ಮತ್ತೂಂದು ಹಿಟ್ ಕೊಡಬಹುದು ಎಂಬ ಲೆಕ್ಕಾಚಾರ ಚಿತ್ರರಂಗದ ಮಂದಿಯದ್ದು.