Advertisement

ಖನ್ನತೆಗೆ ಯೋಗ ಹೆಚ್ಚು ಪರಿಣಾಮಕಾರಿ

10:33 AM Apr 08, 2017 | |

ಬೆಂಗಳೂರು:ಖನ್ನತೆಗೆ ಮಾತ್ರೆಯಿಂದ ಪರಿಹಾರ ಕಂಡುಕೊಳ್ಳಬಹುದಾದರೂ ಮಾತ್ರೆ ನಿಲ್ಲಿಸಿದರೆ ಮತ್ತೆ ಖನ್ನತೆ ಕಾಣಿಸಿಕೊಳ್ಳುತ್ತದೆ. ಆದರೆ ಯೋಗದಿಂದ ಖನ್ನತೆ ಸಮಸ್ಯೆಯಿಂದ ನಾಲ್ಕು ವಾರದಲ್ಲಿ ಹೊರಬರಬಹುದಾಗಿದ್ದು, ಶಾಶ್ವತವಾಗಿ ಖನ್ನತೆಯಿಂದ ಮುಕ್ತಿ ಪಡೆಯಲು ಅವಕಾಶವಿದೆ ಎಂಬುದು ನಿಮ್ಹಾನ್ಸ್‌ ಕೈಗೊಂಡ ಸಂಶೋಧನೆಯಿಂದ ದೃಢಪಟ್ಟಿದೆ.

Advertisement

ನಿತ್ಯ ಒಂದು ಗಂಟೆ ಯೋಗ ಮಾಡುವುದರಿಂದ ಖನ್ನತೆ ನಿವಾರಿಸಿಕೊಳ್ಳಬಹುದು. ಆಯ್ದ ಬಗೆಯ ಯೋಗದ ಮೂಲಕ ಖನ್ನತೆ ಕಾಣಿಸಿಕೊಳ್ಳದಂತೆ ಮುನ್ನಚ್ಚರಿಕೆ ವಹಿಸಲು ಸಹ ಅವಕಾಶವಿದೆ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೈಪೋಟಿ ತೀವ್ರವಾಗಿರುವ ಜತೆಗೆ ಬದಲಾದ ಜೀವನ ಶೈಲಿಯಿಂದ ಒತ್ತಡದಲ್ಲಿ ಕಾರ್ಯ ನಿರ್ವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮವಾಗಿ ಖನ್ನತೆಗೆ ಒಳಗಾಗಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಕ್ರಮೇಣ ಮಾನಸಿಕ ರೋಗಿಗಳಾಗುವ ಸಾಧ್ಯತೆ ತೀವ್ರವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಯೋಗ ಖನ್ನತೆಗೆ ಪರಿಣಾಮಕಾರಿ ಪರಿಹಾರವೆಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ.

ನಿಮ್ಹಾನ್ಸ್‌ನ ಸಮಗ್ರ ಯೋಗ ಕೇಂದ್ರವು ದೆಹಲಿಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಅನುದಾನದ ನೆರವಿನೊಂದಿಗೆ 2012ರಲ್ಲಿ ಸಂಶೋಧನೆ ಕೈಗೊಂಡಿತ್ತು. ಯೋಗದಿಂದ ಖನ್ನತೆ ನಿವಾರಣೆ ಹೇಗೆ ಎಂಬ ಬಗ್ಗೆ ಅಧ್ಯಯನ ನಡೆದಿತ್ತು. ಅದರಂತೆ ಖನ್ನತೆಯಿಂದ ಬಳಲುತ್ತಿದ್ದ 54 ಮಂದಿಯನ್ನು ಆಯ್ಕೆ ಮಾಡಿಕೊಂಡು ಮೂರು ತಂಡ ರಚಿಸಲಾಯಿತು. ಒಂದು ತಂಡಕ್ಕೆ ಕೇವಲ ಮಾತ್ರೆ, ಮತ್ತೂಂದು ತಂಡಕ್ಕೆ ಕೇವಲ ಯೋಗ ಹಾಗೂ ಮಗದೊಂದು ತಂಡಕ್ಕೆ ಯೋಗ, ಮಾತ್ರೆ ನೀಡಲಾಯಿತು. ಸುಮಾರು ಮೂರು ತಿಂಗಳ ಕಾಲ ಈ ಪ್ರಕ್ರಿಯೆ ನಡೆಸಿದ ಬಳಿಕ ಪರಿಶೀಲನೆ ನಡೆಸಿದಾಗ ಯೋಗದಿಂದ ಖನ್ನತೆ ಪರಿಣಾಮಕಾಗಿ ನಿವಾರಣೆಯಾಗಿರುವುದು ಸಾಬೀತಾಗಿದೆ. ಈ ಸಂಬಂಧ 2013ರಲ್ಲಿ ಪ್ರಬಂಧ ಕೂಡ ಮಂಡನೆಯಾಗಿದೆ.

ಯೋಗದಿಂದ ಖನ್ನತೆ ನಿವಾರಣೆ ಹೇಗೆ
ಮಿದುಳು ತನ್ನಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ತಾನೇ ನಿಯಂತ್ರಿಸಿಕೊಳ್ಳುತ್ತದೆ. ಆದರೆ ಮಿತಿ ಮೀರಿದಾಗ ಅದು ಕಾಯಿಲೆಯಾಗುತ್ತದೆ. ಮಾತ್ರೆಯಿಂದ ಖನ್ನತೆ ನಿವಾರಿಸಬಹುದು. ಆದರೆ ಮಾತ್ರೆ ನಿಲ್ಲಿಸಿದರೆ ಮತ್ತೆ ಖನ್ನತೆ ಮರುಕಳಿಸುತ್ತದೆ. ನಿರಂತರ ಯೋಗದಿಂದ ಖನ್ನತೆಯಿಂದ ಮುಕ್ತಿ ಪಡೆಯಬಹುದು. ಒತ್ತಡ ಹೆಚ್ಚಾದಾಗ ದೇಹದಲ್ಲಿ “ಕಾರ್ಟಿಜಾಲ್‌’ ಹೆಸರಿನ ಒತ್ತಡದ ಹಾರ್ಮೋನ್‌ ಪ್ರಮಾಣ ಹೆಚ್ಚಾಗುತ್ತದೆ. ಮಾತ್ರೆಯಿಂದ ಖನ್ನತೆ ತಗ್ಗುವುದೇ ಹೊರತು ಈ ಹಾರ್ಮೋನ್‌ ಪ್ರಮಾಣ ಇಳಿಕೆಯಾಗುವುದಿಲ್ಲ. ಆದರೆ ಯೋಗದಿಂದ ಈ ಹಾರ್ಮೋನ್‌ ಪ್ರಮಾಣ ಕಡಿಮೆಯಾಗಿ ಒತ್ತಡ ನಿವಾರಣೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಖನ್ನತೆ ಹೆಚ್ಚಾದಂತೆ ಒತ್ತಡ ತೀವ್ರವಾಗಿ ಮಿದುಳಿನ ಪುನರ್‌ ಕಾರ್ಯನಿರ್ವಹಣಾ ಸಾಮರ್ಥಯ ತಗ್ಗುತ್ತದೆ. ಯೋಗದಿಂದ ಮಿದುಳಿನ ಪುನರ್‌ ಕಾರ್ಯನಿರ್ವಹಣಾ ಸಾಮರ್ಥಯ (ಬಿಡಿಎನ್‌ಎಫ್ ಎಂಬ ರಾಸಾಯನಿಕ ಅಂಶ ಈ ಸಾಮರ್ಥಯದ ಸಂಕೇತವಾಗಿರುತ್ತದೆ) ಹೆಚ್ಚಾಗಿರುವುದು ಸಂಶೋಧನೆಯಿಂದ ದೃಢಪಟ್ಟಿದೆ. ಹೀಗೆ ಒತ್ತಡ ಹೆಚ್ಚಿಸುವ ಹಾರ್ಮೋನ್‌ ಪ್ರಮಾಣ ತಗ್ಗಿಸುವ ಹಾಗೂ ಮಿದುಳಿನ ಪುನರ್‌ ಕಾರ್ಯನಿರ್ವಹಣಾ ಸಾಮರ್ಥ್ಯ ಹೆಚ್ಚಿಸುವಲ್ಲಿ ಯೋಗ ಪರಿಣಾಮಕಾರಿಯಾಗಿರುವುದು ಅಧ್ಯಯನದಿಂದ ಸಾಬೀತಾಗಿದೆ. ಖನ್ನತೆ ಮಾತ್ರವಲ್ಲದೆ, ಮಾನಸಿಕ ಸಮಸ್ಯೆಗೆ ಸಿಲುಕಿದವರು, ಚಿತ್ತ ವಿಕಲತೆಯಿಂದ ಬಳಲುತ್ತಿರುವವರು ಸಹ ಯೋಗದಿಂದ ಗುಣಮುಖವಾಗಲು ಅವಕಾಶವಿರುವುದು ದೃಢಪಟ್ಟಿದೆ  ಎಂದು ತಜ್ಞರು ವಿವರಿಸುತ್ತಾರೆ.

Advertisement

ನಿತ್ಯ ಒಂದು ಗಂಟೆ ಯೋಗ
ನಿತ್ಯ ಒಂದು ಗಂಟೆಯಂತೆ ನಾಲ್ಕು ವಾರ ಯೋಗಾಭ್ಯಾಸ ಕೈಗೊಂಡರೆ ಖನ್ನತೆ ನಿವಾರಣೆಯಾಗಲಾರಂಭಿಸುತ್ತದೆ. ಯೋಗವನ್ನು ಮುಂದುವರಿಸಿದರೆ ಶಾಶ್ವತವಾಗಿ ಖನ್ನತೆ ಬಾರದು. ಖನ್ನತೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿಯೂ ಯೋಗ ಪರಿಣಾಮಕಾರಿಯಾಗಿದೆ. ಖನ್ನತೆ ಸೇರಿದಂತೆ ಮಾನಸಿಕ ಕಾಯಿಲೆಗಳ ಬಗ್ಗೆ ಜನ ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ. ಚಿಕಿತ್ಸೆ ಪಡೆಯಲು, ಮನೋವೈದ್ಯರನ್ನು ಕಾಣಲು ಹಿಂಜರಿಯುತ್ತಾರೆ. ಇಂಥವರಿಗೆ ಯೋಗ ವರದಾನವೆಂದರೆ ತಪ್ಪಾಗಲಾರದು. ಸದ್ಯ ನಿತ್ಯ 50- 60 ಮಂದಿ ಒಳ- ಹೊರ ರೋಗಿಗಳು ನಿಮ್ಹಾನ್ಸ್‌ನ ಸಮಗ್ರ ಯೋಗ ಕೇಂದ್ರದಲ್ಲಿ ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಜೀವನ ಶೈಲಿ ಮತ್ತು ಯೋಗ ಅಳವಡಿಸಿಕೊಂಡರೆ ಖನ್ನತೆ ಮತ್ತೆ ಕಾಣಿಸಿಕೊಳ್ಳುವುದಿಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಜನಸಂಖ್ಯೆಯ ಶೇ.6ರಷ್ಟು ಮಂದಿಗೆ ಖನ್ನತೆ
ದೇಶದ ಜನಸಂಖ್ಯೆಯ ಶೇ.6ರಷ್ಟು ಮಂದಿ ಅಂದರೆ ಸುಮಾರು ಎಂಟು ಕೋಟಿ ಮಂದಿಗೆ ಖನ್ನತೆ ಇದೆ ಎಂದು ಅಂಕಿಅಂಶಗಳಿಂದ ದೃಢಪಟ್ಟಿದೆ. ಇದು 18ರಿಂದ 30 ವರ್ಷ ವಯೋಮಾನದವರು ಹಾಗೂ 55 ರಿಂದ 65 ವರ್ಷ ವಯೋಮಾನದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಖನ್ನತೆ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಪುರುಷರಿಗೆ ಹೋಲಿಸಿದರೆ 1: 2ರ ಅನುಪಾದಲ್ಲಿ ಮಹಿಳೆಯರಲ್ಲಿ ಖನ್ನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಯಾವುದೇ ಖರ್ಚಿಲ್ಲದೆ ತಾವಿರುವ ಸ್ಥಳದಲ್ಲೇ ತಾವೇ ಯೋಗಾಭ್ಯಾಸ ನಡೆಸುತ್ತಾ ಗುಣಮುಖರಾಗಲು ಅವಕಾಶವಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಖನ್ನತೆಯಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಶತಕೋಟಿಗಿಂತ ಹೆಚ್ಚು ಜನಸಂಖ್ಯೆಯಿರುವ ದೇಶದಲ್ಲಿ ಖನ್ನತೆಯಿರುವವರೆಲ್ಲಾ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಕಷ್ಟಸಾಧ್ಯ. ಅಲ್ಲದೇ ಅಷ್ಟು ಅಗಾಧ ಸಂಖ್ಯೆಯ ಮಾನಸಿಕತಜ್ಞರು ಕೂಡ ಇಲ್ಲ. ರೋಗಿಗಳು ತಮ್ಮ ಸಮಸ್ಯೆಯನ್ನು ತಾವೇ ಗುಣಪಡಿಸಿಕೊಳ್ಳಲು ಯೋಗದಲ್ಲಿ ಅವಕಾಶವಿದೆ. ಯೋಗದ ಮೂಲಕ ಖನ್ನತೆಯಿಂದ ಬಳಲುವವರಿಗೆ ಮಾತ್ರವಲ್ಲದೆ, ಖನ್ನತೆ ಕಾಣಿಸಿಕೊಳ್ಳದಂತೆಯೂ ತಡೆಯಲು ಸಾಧ್ಯವಿದೆ. ನಿತ್ಯ ಒಂದು ಗಂಟೆ ಯೋಗದ ಮೂಲಕ ಖನ್ನತೆಯಿಂದ ದೂರವಿರಲು ಸಹಕಾರಿಯಾಗಲಿದೆ.
– ಡಿ.ಶಿವರಾಮ ವಾರಂಬಳ್ಳಿ, ಹೆಚ್ಚುವರಿ ಪ್ರಾಧ್ಯಾಪಕ, ಮನೋವಿಜ್ಞಾನ ವಿಭಾಗ, ನಿಮ್ಹಾನ್ಸ್‌ ಮತ್ತು ಸಮಗ್ರ ಯೋಗ ಕೇಂದ್ರ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next