ಭಾಲ್ಕಿ: ಕೇಂದ್ರ ಸರಕಾದಿಂದ ಬೀದರ ಜಿಲ್ಲೆಗೆ ಮಂಜೂರಾಗಿ ರುವ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕುರಿತ ರಾಷ್ಟ್ರೀಯ ಸಂಸ್ಥೆ-ಸಿಪೇಟ್ ಅನ್ನು ತಾಲೂಕಿನ ಹಾಲಹಳ್ಳಿಯ ಕಲಬುರ್ಗಿ ವಿಶ್ವಾವಿದ್ಯಾಲಯಕ್ಕೆ ನೀಡಿರುವ ಜಮೀನಿನಲ್ಲೇ ಆರಂಭಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಮತ್ತು ಜಿಲ್ಲೆಯ ಸಂಸದರಿಗೆ ಪತ್ರ ಬರೆದಿರುವ ಅವರು, ಕಳೆದ ಮೂರು ವರ್ಷಗಳ ಹಿಂದೆಯೇ ಜಿಲ್ಲೆಗೆ ಸಿಪೇಟ್ ಮಂಜೂರಾಗಿದ್ದರೂ ಈ ವಿಷಯವನ್ನು ಇಷ್ಟು ವರ್ಷ ಬಹಿರಂಗ ಪಡಿಸದೆ ಮುಚ್ಚಿಟ್ಟಿರುವ ಸರ್ಕಾರದ ನಿಲುವು ಬೇಸರ ತರಿಸಿದೆ. ಈ ವಿಚಾರವನ್ನು ಜಿಲ್ಲೆಯ ಆರು ವಿಧಾನಸಭೆ ಸದಸ್ಯರು, ನಾಲ್ವರು ವಿಧಾನ ಪರಿಷತ್ ಸದಸ್ಯರು ಸೇರಿ 10 ಶಾಸಕರ ಗಮನಕ್ಕೆ ತಂದಿದ್ದರೆ, ಅದು ಕಾರ್ಯಗತವಾಗುತ್ತಿತ್ತು.
ಈ ವಿಳಂಬಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಲಹಳ್ಳಿಯ ಕಾರಂಜಾ ಜಲಾಶಯದ ಪಕ್ಕದಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯಕ್ಕೆ 350 ಎಕರೆ ಜಮೀನು ಒದಗಿಸಲಾಗಿದೆ. ಈ ವಿವಿಗೆ ಇಷ್ಟೊಂದು ಪ್ರಮಾಣದ ಜಮೀನಿನ ಅಗತ್ಯ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಮೀನನ್ನು ಸಿಪೇಟ್ ಕೇಂದ್ರಕ್ಕೆ ನೀಡಿದರೆ, ಅದರಿಂದ ವಿವಿಗೂ ಅನುಕೂಲವಾಗುತ್ತದೆ. ಕಾರಣ ಅದು ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರಣ ಶೈಕ್ಷಣಿಕ ಪರಿಸರದಲ್ಲಿ ಅದು ಹೆಚ್ಚು ಉತ್ತಮವಾಗಿ ಕಾರ್ಯ ನಿರ್ವಹಿಸಬಹುದಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಮುಂದೆ ಜಮೀನು ಹುಡುಕಲು ಸಮಯ ವ್ಯರ್ಥ ಮಾಡದೆ, ಹಾಲಹಳ್ಳಿಯಲ್ಲೇ ಸಿಪೇಟ್ ಅನ್ನು ತ್ವರಿತವಾಗಿ ಆರಂಭಿಸಲು ಆಗ್ರಹಿಸಿದ್ದಾರೆ.ಈ ವರ್ಷದ ಬೀದರ ಜಿಲ್ಲೆಯ ಸಿಪೇಟ್ ಕೇಂದ್ರದ ಯೋಜನೆಗೆ ತಕ್ಷಣ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹೆಚ್ಚುವರಿ ಕ್ರಿಯಾ ಯೋಜನೆಯಲ್ಲಿ ಹಣ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿರುವುದಾಗಿಯೂ ತಿಳಿಸಿರುವ ಅವರು, ಹಾಲಹಳ್ಳಿಯಲ್ಲಿ ಸಿಪೇಟ್ ಆರಂಭಿಸಲು ಕ್ರಮ ವಹಿಸಿದರೆ, ಕ್ಷೇತ್ರದ ಶಾಸಕನಾಗಿ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.