Advertisement

ಖಂಡ್ರೆ, ಖರ್ಗೆ, ಧರಂ 50 ವರ್ಷ ಆಳಿದ್ದಾರೆ, ಅಭಿವೃದ್ಧಿ ಮಾಡಿಲ್ಲ: ಯತ್ನಾಳ್‌

03:46 PM Sep 24, 2021 | Team Udayavani |

ವಿಧಾನಸಭೆ: ಕಲ್ಯಾಣ ಕರ್ನಾಟಕ ಭಾಗವನ್ನು ಕಳೆದ 50 ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ ಹಾಗೂ ಭೀಮಣ್ಣ ಖಂಡ್ರೆ ಆಳ್ವಿಕೆ ಮಾಡಿದ್ದಾರೆ. ಇಷ್ಟು ವರ್ಷ ಆಳ್ವಿಕೆ ಮಾಡಿದರೂ, ಆ ಭಾಗದ ಅಭಿವೃದ್ಧಿ ಮಾಡಿಲ್ಲ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದರು. ಅಲ್ಲದೇ, ಕಲ್ಯಾಣ ಕರ್ನಾಟಕ ಭಾಗಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಹೆಚ್ಚಿನ ಅನುದಾನ ನೀಡಿ ಆ ಭಾಗದಲ್ಲಿ ಅಭಿವೃದ್ಧಿಯಾಗುವಂತೆ ನೋಡಿಕೊಂಡಿದ್ದಾರೆ
ಎಂದು ಹೇಳಿದರು.

Advertisement

ಅವರ ಹೇಳಿಕೆಗೆ ಕಾಂಗ್ರೆಸ್‌ ಸದಸ್ಯರಾದ ಈಶ್ವರ ಖಂಡ್ರೆ, ಪ್ರಿಯಾಂಕ್‌ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ ಅವರು ಆಳ್ವಿಕೆ ಮಾಡಿಲ್ಲ. ಜನರ ಸೇವೆ ಮಾಡಿದ್ದಾರೆ. ಅವರು ಅಭಿವೃದ್ಧಿ ಕಾರ್ಯ ಮಾಡಿದ್ದರಿಂದಲೇ ಜನರು ಅವರನ್ನು ನಿರಂತರ ಆಯ್ಕೆ ಮಾಡಿದ್ದಾರೆ. ಯತ್ನಾಳ ಅವರಿಗೆ ಯಡಿಯೂರಪ್ಪ ಅವರ ಮೇಲೆ ಈಗಿರುವ ಪ್ರೀತಿ ಒಂದು ತಿಂಗಳ ಹಿಂದೆ ಇದ್ದಿದ್ದರೆ ಒಳ್ಳೆಯದಿತ್ತು ಎಂದರು.

ಈಶ್ವರ ಖಂಡ್ರೆ ಆಕ್ಷೇಪಕ್ಕೆ ಬಸನಗೌಡ ಯತ್ನಾಳ್‌, ನಾನು ಯಾವುದೇ ಮಠಾಧೀಶರ ಕಾಲು ಹಿಡಿದು ಮಂತ್ರಿಯಾಗಿಲ್ಲ. ವೀರಶೈವ ಮಹಾಸಭೆಯನ್ನು ನಿಮ್ಮ ಮನೆಯಂತೆ ಮಾಡಿಕೊಂಡು ಹಾಳು ಮಾಡಿದ್ದೀರಿ ಎಂದು ತಿರುಗೇಟು ನೀಡಿದರು.

ಕಲ್ಯಾಣ ಕರ್ನಾಟಕದ ಅವ್ಯವಹಾರ ತನಿಖೆಗೆ ಆಗ್ರಹ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೊರೊನಾ ನಿಯಂತ್ರಣ ಸಲಕರಣೆ ಖರೀದಿಯಲ್ಲಿ ಟೆಂಡರ್‌ ಕರೆಯುವಲ್ಲಿ ಅವ್ಯವಹಾರವಾಗಿದೆ ಎಂದು ಕಾಂಗ್ರೆಸ್‌ ಸದಸ್ಯ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. ವಿಧಾನಸಭೆಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ನಿಯಮ 69 ರಡಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಮಂಡಳಿಯ ಹಣದಿಂದ ಕೋವಿಡ್‌ ಉಪಕರಣ ಖರೀದಿಸಲಾಗಿದೆ.

ಕಲ್ಯಾಣ ಕರ್ನಾಟಕ ಯೋಜನೆಗಳನ್ನು ಜಾರಿಗೊಳಿಸಲು ಖಾಸಗಿ ಸಂಸ್ಥೆಗೆ ನೀಡಿದ್ದಾರೆ. ಆ ಸಂಸ್ಥೆಯನ್ನು ಯಾವ ಮಾನದಂಡದ ಅಡಿ ಆಯ್ಕೆ ಮಾಡಲಾಗಿದೆ ಎನ್ನುವುದು ಯಾರಿಗೂ ಮಾಹಿತಿಯಿಲ್ಲ. ಸರ್ಕಾರದ ಪರವಾಗಿ ಖಾಸಗಿ ಸಂಸ್ಥೆಯೇ ಅರ್ಜಿಗಳನ್ನು ಕರೆಯುತ್ತದೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಮೂಲಕ ಜನರನ್ನು ತೀರ್ಥ ಯಾತ್ರೆಗೆ ಕಳಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕದಲ್ಲಿ ಉದ್ಯೋಗ ಸೃಷ್ಠಿಯಾಗುತ್ತಾ ಎಂದು ಪ್ರಶ್ನಿಸಿದರು.

Advertisement

ಈ ಸಂಸ್ಥೆಗೆ ಕಾನೂನು ಬಾಹಿರವಾಗಿ 100 ಕೋಟಿ ರೂ. ನೀಡಿರುವುದನ್ನು ವಾಪಸ್‌ ಪಡೆಯಬೇಕು. ಈ ಸಂಸ್ಥೆಗೆ ಹಣ ನೀಡಿರುವ ಬಗ್ಗೆ ತನಿಖೆ ನಡೆಸಬೇಕು. ಕೆಕೆಆರ್‌ಡಿ ಅಭಿವೃದ್ಧಿಗೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next