Advertisement

HMTಯ 10000 ಕೋಟಿ ಮೌಲ್ಯದ ಭೂಮಿ ವಾಪಸ್‌ ಪಡೆಯಲು ಖಂಡ್ರೆ ಸೂಚನೆ

01:05 PM Aug 12, 2024 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯು ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಮಾರಾಟ ಮಾಡಿಕೊಂಡಿದೆ ಎಂದು ಆರೋಪಿಸಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಬೆಂಗಳೂರಿನ ಪೀಣ್ಯ ಜಾಲಹಳ್ಳಿ ಪ್ಲಾಂಟೇಶನ್‌ ಸರ್ವೇ ನಂ.1 ಮತ್ತು 2ರಲ್ಲಿರುವ 10 ಸಾವಿರ ಕೋಟಿ ರೂ.ಗೂ ಅಧಿಕ ಬೆಲೆಬಾಳುವ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಇಲಾಖೆಗೆ ಹಿಂಪಡೆಯಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಈ ಕುರಿತು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರಿಗೆ ಟಿಪ್ಪಣಿ ಕಳುಹಿಸಿರುವ ಅವರು, ಪೀಣ್ಯ ಬಳಿ ಇರುವ ಈ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿದ್ದೆಂದು 1878ರ ಅರಣ್ಯ ನಿಯಮಾವಳಿ ಸೆಕ್ಷನ್‌ 9 ರಡಿ ಘೋಷಿಸಿದ್ದು, 1896ರ ಜೂ.11 ರಲ್ಲಿ ಮೈಸೂರು ಮಹಾರಾಜರ ಕಾಲದಲ್ಲೇ ಅಧಿಸೂಚನೆ ಸಹ ಹೊರಡಿಸಲಾಗಿದೆ. ಇಂತಹ ಭೂಮಿಯನ್ನು 1963 ರಲ್ಲಿ ಅಂದಿನ ಬೆಂಗಳೂರು ಜಿಲ್ಲಾಧಿಕಾರಿ ಹನುಮಾನ್‌ ಎಂಬುವರು ಎಚ್‌ಎಂಟಿಗೆ ದಾನವಾಗಿ ನೀಡಿದ್ದು, ಈ ಬಗ್ಗೆ ಯಾವುದೇ ಅಧಿಸೂಚನೆ ಆಗಿಲ್ಲ ಅಥವಾ ಅರಣ್ಯೇತರ ಉದ್ದೇಶಕ್ಕೆ ಬಳಸುವ ಬಗ್ಗೆ ಡಿನೋಟಿಫಿಕೇಶ್‌ ಕೂಡ ಆಗಿಲ್ಲ. ಸಾಲದ್ದಕ್ಕೆ ಎಚ್‌ ಎಂಟಿಯು ಅಕ್ರಮವಾಗಿ ಸರ್ಕಾರಿ ಇಲಾಖೆ, ವಿವಿಧ ಸಂಸ್ಥೆ ಹಾಗೂ ಖಾಸಗಿಯವರಿಗೆ ಜಮೀನು ಮಾರಾಟ ಮಾಡುತ್ತಿದ್ದು, ಅರಣ್ಯ ಸಂರಕ್ಷಣಾ ಕಾಯ್ದೆ ಸೆಕ್ಷನ್‌ 64ಎ ಅಡಿ ಭೂಮಿ ತೆರವಿಗೆ ಆದೇಶವಾಗಿದ್ದರೂ ಅಧಿಕಾರಿ ಗಳು ಕ್ರಮ ವಹಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಅರಣ್ಯ ಭೂಮಿ ದಾನವಾಗಿ ನೀಡಲು ಕಾನೂನಿನಲ್ಲಿ ಅವಕಾಶಗಳೇ ಇಲ್ಲ. ಆದರೂ, ಎಚ್‌ ಎಂಟಿಗೆ ದಾನಪತ್ರ ಮಾಡಿಕೊಡಲಾಗಿದೆ. ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಬೇಕಿದ್ದರೆ, ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಡಿನೋಟಿಫೈ ಮಾಡಬೇಕು. ಆ ಪ್ರಕ್ರಿಯೆಯೂ ಆಗಿಲ್ಲ. ಒಟ್ಟಾರೆ 599 ಎಕರೆ ಪೈಕಿ 469.32 ಎಕರೆಯನ್ನು ಎಚ್‌ಎಂಟಿಗೆ ಕೊಡಲಾಗಿದ್ದು, ಇದರಲ್ಲಿ ಕಟ್ಟಡ ನಿರ್ಮಾಣ ಮಾಡದೇ ಖಾಲಿ ಇರುವ 281 ಎಕರೆಯನ್ನು ಮೊದಲು ವಶಕ್ಕೆ ಪಡೆದು, ಉಳಿದ ಜಾಗ ವಶಪಡಿಸಿಕೊಳ್ಳಲು ಕಟ್ಟಪ್ಪಣೆ ಮಾಡಿದ್ದಾರೆ.

ಮಧ್ಯಂತರ ಅರ್ಜಿ ಹಿಂಪಡೆಯಲೂ ಸೂಚನೆ: ಈ ಭೂಮಿಯನ್ನು ಎಚ್‌ಎಂಟಿ ಸರ್ಕಾರಿ, ಖಾಸಗಿ ವ್ಯಕ್ತಿ ಗಳಿಗೆ ಮಾರಾಟ ಮಾಡುತ್ತಿರುವುದು ಅಕ್ರಮವಾಗಿದೆ. 2020ರಲ್ಲಿ ಡಿನೋಟಿಫೈ ಮಾಡಲು ಅನುಮತಿ ಕೋರಿ ಸುಪ್ರೀಂಗೆ ಇಲಾಖೆ ಮಧ್ಯಂತರ ಅರ್ಜಿ ಸಲ್ಲಿಸಿರು ವುದು ಸರ್ಕಾರದ ಗಮನಕ್ಕೆ ಬಂದಿದ್ದು, ಐ.ಎ.ಯನ್ನು ಹಿಂಪಡೆಯಲು, ತನಿಖೆ ನಡೆಸುವಂತೆ ಅಪರ ಮುಖ್ಯ ಕಾರ್ಯದರ್ಶಿಗೆ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next