ಬಸವಕಲ್ಯಾಣ: ತಾಲೂಕಿನ ಮುಚಳಂಬ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಬಿ. ನಾರಾಯಣರಾವ್ ಪರ ಪ್ರಚಾರ ನಡೆಸಿ, ಮತ ಯಾಚಿಸಿದರು.
ಮುಚಳಂಬದಲ್ಲಿ ರವಿವಾರ ಸಂಜೆ ಪಾದಯಾತ್ರೆ ನಡೆಸಿದ ನಂತರ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾರಾಯಣರಾವ್ ಅವರು ನಾಲ್ಕು ದಶಕಗಳಿಂದ ಜನ ಸೇವೆಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತರೂ ಜನರೊಂದಿಗೆ ಬೆರೆತು ಸೇವೆ ಸಲ್ಲಿಸುತ್ತಿದ್ದಾರೆ. ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರದ ಜನ ಅಭಿವೃದ್ಧಿಗಾಗಿ ಈ ಬಾರಿ ಅವರನ್ನು ಬೆಂಬಲಿಸಬೇಕು. ನನ್ನನ್ನೇ ಅಭ್ಯರ್ಥಿ ಎಂದು ಭಾವಿಸಿ ಅವರಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಭಾಗ್ಯಗಳ ಸರಣಿ ಯೋಜನೆಗಳ ಮೂಲಕ ಬಡವರು, ಶೋಷಿತರು, ಕೆಳವರ್ಗ ದವರು, ದೀನ ದಲಿತರು, ಅಸಹಾಯಕರ ಬಾಳು ಬೆಳಗಿದೆ. ಸರ್ವ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದೆ. ಜನಪರ, ಪಾರದರ್ಶಕ ಆಡಳಿತವನ್ನು ನೀಡಿದೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲೂ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಅಭ್ಯರ್ಥಿ ಬಿ. ನಾರಾಯಣರಾವ್ ಮಾತನಾಡಿ, ಬಡ ಕುಟುಂಬದಿಂದ ಬಂದಿರುವ ನಾನು ಸಮಾಜ ಸೇವೆಗಾಗಿ ನನ್ನ ಜೀವನವನ್ನೆ ಮುಡುಪಾಗಿ ಇಟ್ಟಿದ್ದೇನೆ. ಅಧಿಕಾರ ಇರಲಿ, ಬಿಡಲಿ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.
ಮತದಾರರು ಕ್ಷೇತ್ರದಲ್ಲಿ ಎಲ್ಲರಿಗೂ ಅಧಿಕಾರ ಕೊಟ್ಟು ನೋಡಿದ್ದಾರೆ. ಈ ಬಾರಿ ನನಗೆ ಅವಕಾಶ ಕೊಡುವ ಮೂಲಕ ಜನರ ಸೇವೆ ಮಾಡಲು ಇನ್ನಷ್ಟು ಬಲ ಕೊಡಬೇಕು ಎಂದು ಮನವಿ ಮಾಡಿದರು.
ಪಕ್ಷದ ತಾಲೂಕು ಅಧ್ಯಕ್ಷ ನೀಲಕಂಠ ರಾಠೊಡ, ನಗರ ಘಟಕದ ಅಧ್ಯಕ್ಷ ಅಜರಲಿ ನವರಂಗ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಪ್ರಮುಖರಾದ ವೈಜಿನಾಥ ಕಾಮಶಟ್ಟಿ, ಶಿವರಾಜ ನರಶಟ್ಟಿ, ಶಿವಶರಣ ಬಿರಾದಾರ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.