Advertisement

ಐವತ್ತರ ಸಂಭ್ರಮದಲ್ಲಿ ಖನನ

11:03 PM Jul 04, 2019 | mahesh |

ಕನ್ನಡದಲ್ಲಿ ಹೊಸಬರ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದೇ ಕಷ್ಟ. ಸಿಕ್ಕರೂ ಪ್ರೇಕ್ಷಕರನ್ನು ಸೆಳೆಯುವುದು ಇನ್ನೂ ಕಷ್ಟ. ಸೆಳೆದರೂ ಆ ಚಿತ್ರ ಹೆಚ್ಚು ದಿನ ಪೂರೈಸುವುದು ದೂರದ ಮಾತು. ಆದರೆ, ಇಲ್ಲೊಂದು ಹೊಸಬರ ತಂಡ ಇವೆಲ್ಲಾ ಹಂತಗಳನ್ನು ಯಶಸ್ವಿಯಾಗಿ ಮುಗಿಸಿ, ಬರೋಬ್ಬರಿ 50 ದಿನಗಳನ್ನು ಕಂಡಿದೆ. ಹೌದು, ‘ಖನನ’ ಅರ್ಧ ಶತಕ ಬಾರಿಸಿದ ಚಿತ್ರ. ಆ ಖುಷಿಗೆ ಚಿತ್ರತಂಡ, ನೆನಪಿನ ಕಾಣಿಕೆ ವಿತರಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು.

Advertisement

ಅಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, ಉಪಾಧ್ಯಕ್ಷರಾದ ಉಮೇಶ್‌ ಬಣಕಾರ್‌,ಕಾರ್ಯದರ್ಶಿ ಎನ್‌.ಎಂ.ಸುರೇಶ್‌, ವಿತರಕ ಭಾಷಾ ಇತರರು ಆ ಸಂಭ್ರಮಕ್ಕೆ ಸಾಕ್ಷಿಯಾದರು. ನೆನಪಿನ ಕಾಣಿಕೆ ವಿತರಿಸುವ ಮುನ್ನ, ಚಿತ್ರತಂಡ, ಚಿತ್ರದ ತುಣುಕು ಪ್ರದರ್ಶಿಸಿತು. ಚಿತ್ರ ಶುರುವಾದಾಗಿನಿಂದ ಬಿಡುಗಡೆಯಾಗುವ ತನಕ ಚಿತ್ರದ ಹಂತಗಳನೆಲ್ಲ ಆ ತುಣುಕಿನಲ್ಲಿ ಅಳವಡಿಸಿ, ತೋರಿಸಲಾಯಿತು. ಆ ಕಾರ್ಯಕ್ರಮದ ಅವಧಿಯನ್ನು ಆ ತುಣುಕು ಪ್ರದರ್ಶನವೇ ತಿಂದುಹಾಕಿತು. ನಂತರ ಮಾತಿಗಿಳಿದ ನಿರ್ದೇಶಕ ರಾಧ ಅಂದು ಎಂದಿಗಿಂತಲೂ ಖುಷಿಯಲ್ಲಿದ್ದರು. ಮೊದಲ ಚಿತ್ರ 50 ದಿನ ಪೂರೈಸಿದ್ದು ಆ ಖುಷಿಗೆ ಕಾರಣವಾಗಿತ್ತು. ಅವಕಾಶ ಕೊಟ್ಟ ನಿರ್ಮಾಪಕರಿಗೆ, ಸಹಕರಿಸಿದ ತಂತ್ರಜ್ಞ ರಿಗೆ ಅವರು ಥ್ಯಾಂಕ್ಸ್‌ ಹೇಳಿದರು. ನಿರ್ಮಾಪಕ ಶ್ರೀನಿವಾಸ್‌ರಾವ್‌ ಅವರಿಗೆ ಒಳ್ಳೆಯ ಸಿನಿಮಾ ನಿರ್ಮಿಸಿದ ಖುಷಿ ಒಂದು ಕಡೆಯಾದರೆ, ತಮ್ಮ ಪುತ್ರ ಆರ್ಯವರ್ಧನ್‌ ಅವರನ್ನು ಹೀರೋನನ್ನಾಗಿ ಮಾಡಿದ ಸಂಭ್ರಮ ಇನ್ನೊಂದು ಕಡೆ. ಮೊದಲ ಚಿತ್ರ ಅರ್ಧ ಶತಕ ಬಾರಿಸಿದ ಸಂತಸ ಮತ್ತೂಂದು ಕಡೆ. ನಿರ್ಮಾಪಕರಾದ ತೃಪ್ತಿ ಇದೆ ಎಂದು ಹೇಳಿಕೊಂಡ ಅವರು, ಮಗನಿಗೆ ಮತ್ತೂಂದು ಸಿನಿಮಾ ಮಾಡುವುದನ್ನೂ ಅಂದು ಪ್ರಕಟಿಸಿದರು.

ನಾಯಕ ಆರ್ಯವರ್ಧನ್‌ ಖುಷಿಗೆ ಪಾರವೇ ಇರಲಿಲ್ಲ. ವೇದಿಕೆ ಮೇಲೆ ಅತ್ತಿಂದಿತ್ತ ಓಡಾಡುತ್ತಲೇ, ‘ಮೊದಲ ಲವರ್ ನ ಹೇಗೆ ಮರೆಯಲು ಆಗುವುದಿಲ್ಲವೋ, ಹಾಗೆಯೇ ಈ ಮೊದಲ ಚಿತ್ರದ ಗೆಲುವು ಕೂಡ ಮರೆಯಲು ಆಗಲ್ಲ. ಈ ಯಶಸ್ಸಿನ ಹಿಂದೆ ಇದ್ದ ಎಲ್ಲರಿಗೂ ಥ್ಯಾಂಕ್ಸ್‌ ‘ ಎಂದರು.

ಈ ಸಂದರ್ಭದಲ್ಲಿ ಚಿತ್ರದಲ್ಲಿ ನಟಿಸಿದ ಬ್ಯಾಂಕ್‌ ಜನಾರ್ದನ್‌, ಯುವ ಕಿಶೋರ್‌, ಕಲಾವಿದರು, ತಂತ್ರಜ್ಞ ರಿಗೆ ನೆನಪಿನ ಕಾಣಿಕೆ ವಿತರಿಸಿ ಗೌರವಿಸಲಾಯಿತು. ಕರಿಸುಬ್ಬು ಸೇರಿದಂತೆ ಚಿತ್ರರಂಗದ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next