Advertisement

ಕಳಸಾ-ಬಂಡೂರಿ: ಶೀಘ್ರ ಈ ಭಾಗದ ಸಂಸದರ ಸಭೆ ಕರೆಯುವೆ

03:07 PM May 26, 2017 | Team Udayavani |

ಹುಬ್ಬಳ್ಳಿ: ಕಳಸಾ-ಬಂಡೂರಿ, ಮಹದಾಯಿ ಯೋಜನೆ ಕುರಿತಾಗಿ ಈ ಭಾಗದ ಸಂಸದರ ಸಭೆ ಕರೆದು ಚರ್ಚಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು. ಕಳಸಾ-ಬಂಡೂರಿ, ಮಹದಾಯಿ ಹೋರಾಟ ಸಮಿತಿಯವರು ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚಿಸಿದರು. 

Advertisement

ಯೋಜನೆ ಜಾರಿಗೆ ಒತ್ತಾಯಿಸಿ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಬಿಜೆಪಿ ನಾಯಕರಿಂದ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಸ್ಥಳೀಯ ಬಿಜೆಪಿ ನಾಯಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರಲ್ಲದೆ, ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಮಹದಾಯಿ ವಿವಾದ ನ್ಯಾಯಾಧಿಕರಣದಲ್ಲಿದೆ.

ತೀರ್ಪು ಬರುವವರೆಗೆ ಕಾಯೋಣ ಎಂದು ಯಡಿಯೂರಪ್ಪ ಅವರ ಹೇಳಿದಾಗ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹೋರಾಟಗಾರರು, ಪ್ರಧಾನಿ ಮಧ್ಯಸ್ಥಿಕೆಯೊಂದಿಗೆ ರಾಜಿ ಸಂಧಾನ ಮೂಲಕ ಇತ್ಯರ್ಥಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು. 

ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅವರು ಇದೇ ಕಳಸಾ-ಬಂಡೂರಿಗಾಗಿ ಹೋರಾಟ ಮಾಡಿದ್ದು, ಇದೀಗ ಅವರು ಯೋಜನೆ ಕುರಿತಾಗಿ ಮರೆತವರಂತೆ ವರ್ತಿಸುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದರು. ಪ್ರಧಾನಿ ಮಧ್ಯಪ್ರವೇಶ ಸಾಧ್ಯವಾಗದು.

ಮೊದಲು ಈ ಭಾಗದ ಸಂಸದರ ಸಭೆ ಕರೆದು ಚರ್ಚಿಸುತ್ತೇನೆ. ಅನಂತರ ಕೇಂದ್ರದ ಮನವೊಲಿಕೆ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ರೈತರ ಸಾಲ ಮನ್ನಾ ವಿಚಾರವನ್ನು ಹೋರಾಟಗಾರರು ಪ್ರಸ್ತಾಪಿಸಿದಾಗ, ಯಡಿಯೂರಪ್ಪ ಅವರು ರಾಜ್ಯ ಸರಕಾರ ಮೊದಲು ರೈತರ ಸಾಲ ಮನ್ನಾ ಮಾಡಲಿ ಎಂದಾಗ,

Advertisement

ಹೋರಾಟಗಾರರು ರಾಜ್ಯ ಸರಕಾರದ ಅಡಿಯಲ್ಲಿ ಶೇ.20ರಷ್ಟು ಮಾತ್ರ ರೈತರ ಸಾಲ ಇದ್ದು, ಶೇ.80ರಷ್ಟು ಸಾಲ ರಾಷ್ಟ್ರೀಕೃತ ಬ್ಯಾಂಕ್‌ ಗಳಿಂದ ಇದ್ದು, ಕೇಂದ್ರ ಸರಕಾರ ಸಾಲ ಮನ್ನಾಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕೇಂದ್ರದ ನಿರ್ಧಾರ ಇಡೀ ದೇಶಕ್ಕೆ ಅನ್ವಯವಾಗುವುದರಿಂದ ಎಲ್ಲ ಸಾಧಕ-ಬಾಧಕ ಪರಿಗಣಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು. 

ಬಿಜೆಪಿ ಮುಖಂಡರಾದ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ಬಸವರಾಜ ಬೊಮ್ಮಾಯಿ, ಶಂಕರ ಪಾಟೀಲ ಮುನೇನಕೊಪ್ಪ, ಚೈತ್ರಾ ಶಿರೂರು, ಎಸ್‌.ಐ.ಚಿಕ್ಕನಗೌಡ್ರ, ಹೋರಾಟ ಗಾರರಾದ ಸುಭಾಸಗೌಡ ಪಾಟೀಲ, ವೀರಣ್ಣ ಮಳಗಿ, ಅಮೃತ ಇಜಾರಿ, ಹೇಮನಗೌಡ, ಸಂಜೀವ ದುಮ್ಮಕನಾಳ ಇನ್ನಿತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next