ಹೊಸದಿಲ್ಲಿ: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ವಿಧಾನಸಭೆಯ ಗೇಟ್‌ನ ಆವರಣದಲ್ಲಿ ಕೆಲ ಕಿಡಿಗೇಡಿಗಳು ಖಲಿಸ್ಥಾನ ಧ್ವಜವನ್ನು ಹಾಕಿದ್ದಾರೆ.
ಹಳದಿ ಬಣ್ಣದ ಧ್ವಜದಲ್ಲಿ “ಖಲಿಸ್ಥಾನ’ ಎಂದು ಬರೆಯಲಾಗಿದೆ. ಶನಿವಾರ ತಡರಾತ್ರಿ ಕಿಡಿಗೇಡಿಗಳು ಈ ಕೃತ್ಯವೆಸಗಿರಬಹುದು ಎಂದು ಅಂದಾಜಿಸಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಗೋಡೆಯ ಮೇಲೆ ಬೇರೆ ಬಣ್ಣ ಬಳಿದು, ಧ್ವಜವನ್ನು ತೆಗೆದುಹಾಕಿದ್ದಾರೆ. ಈ ಘಟನೆಯು ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ಭಾರೀ ವಾಗ್ವಾದಕ್ಕೆ ಕಾರಣ ವಾಗಿದೆ. ಹಿಮಾಚಲ ಪ್ರದೇಶ ಸಿಎಂ ಜೈರಾಂ ಠಾಕೂರ್ ಟ್ವೀಟ್‌ನಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ ಮತ್ತು ಅಲ್ಲಿ ಭದ್ರತೆ ಮತ್ತಷ್ಟು ಬಿಗಿಗೊಳಿಸಲು ಏರ್ಪಾಡು ಮಾಡುವುದಾಗಿ ಹೇಳಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯಾ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದೊಂದು ಭದ್ರತಾ ವೈಫಲ್ಯ ಎಂದು ಹೇಳಿರುವ ಆಪ್, ರಾಷ್ಟ್ರೀಯ ಭದ್ರತೆಯಲ್ಲಿ ವಿಫಲವಾಗಿರುವ ಬಿಜೆಪಿ ಸರಕಾರ ಇನ್ನು ಜನರನ್ನು ಯಾವ ರೀತಿ ರಕ್ಷಿಸಲಿದೆ ಎಂದು ಪ್ರಶ್ನಿಸಿದೆ.