Advertisement

ಖಲಿಸ್ಥಾನ್‌ ಉಗ್ರರ ನೇಮಕಕ್ಕೆ ಆಕ್ಷೇಪ

01:55 AM Mar 30, 2019 | mahesh |

ಹೊಸದಿಲ್ಲಿ: ಕರ್ತಾರ್ಪುರ ಕಾರಿಡಾರ್‌ ನಿರ್ವಹಣಾ ಸಮಿತಿಯಲ್ಲಿ ಖಲಿಸ್ಥಾನ್‌ ಪ್ರತ್ಯೇಕತಾ ವಾದಿಗಳನ್ನು ಸದಸ್ಯರನ್ನಾಗಿ ನೇಮಿಸಿರುವ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಪಾಕಿಸ್ಥಾನದ ಡೆಪ್ಯೂಟಿ ಹೈಕಮಿಷನರ್‌ ಸಯೀದ್‌ ಹೈದರ್‌ ಶಾ ಅವರಿಗೆ ಕೇಂದ್ರ ಸರಕಾರ ಸಮನ್ಸ್‌ ಜಾರಿಗೊಳಿಸಿದೆ.

Advertisement

ಈ ಕುರಿತಂತೆ, ವಿದೇಶಾಂಗ ಇಲಾಖೆ ಪತ್ರವೊಂದನ್ನು ಶಾ ಅವರಿಗೆ ರವಾನಿಸಿದ್ದು, ಅದರಲ್ಲಿ ಕಾರಿಡಾರ್‌ ಕುರಿತಂತೆ ಅಟ್ಟಾರಿಯಲ್ಲಿ ಇತ್ತೀಚೆಗೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಭಾರತ ಮಂಡಿಸಿದ್ದ ಕೆಲವು ಪ್ರಸ್ತಾವನೆಗಳ ಬಗ್ಗೆ ಪಾಕಿಸ್ಥಾನದ ನಿಲುವೇನು ಎಂಬುದನ್ನು ಆದಷ್ಟು ಬೇಗನೇ ತಿಳಿಸಬೇಕು. ಪಾಕಿಸ್ಥಾನ ತನ್ನ ನಿಲುವು ಪ್ರಕಟಿಸಿದ ಮೇಲಷ್ಟೇ ಕಾರಿಡಾರ್‌ ನಿರ್ಮಾಣಕ್ಕೆ ಸಂಬಂಧಿಸಿ ನಡೆಯ ಬೇಕಿರುವ ಉಭಯ ದೇಶಗಳ ತಾಂತ್ರಿಕ ತಜ್ಞರ ಸಭೆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದೆ. ಈ ಹಿಂದೆ ನಿರ್ಧರಿಸಿದಂತೆ, ತಜ್ಞರ ಸಮಿತಿ ಸಭೆ ಏ. 2ರಂದು ವಾಘಾ ಗಡಿಯಲ್ಲಿ ನಡೆಯಬೇಕಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ಥಾನ, ತನ್ನ ಅಭಿಪ್ರಾಯ ಪಡೆಯದೇ ಭಾರತ ಸಭೆ ಮುಂದೂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ.

ಶಾರದಾ ಪೀಠ ಕಾರಿಡಾರ್‌ಗೆ ಸಮ್ಮತಿಯಿಲ್ಲ: ಪಾಕ್‌
ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠಕ್ಕೆ ಭೇಟಿ ನೀಡುವ ಭಾರತದ ಹಿಂದೂಗಳಿಗಾಗಿ ಕಾರಿಡಾರ್‌ ನಿರ್ಮಿಸಲು ಅನುಮತಿ ನೀಡಿರುವ ವರದಿಗಳನ್ನು ಪಾಕಿಸ್ಥಾನ ನಿರಾಕರಿಸಿದೆ. ಎರಡೂ ದೇಶಗಳ ನಡುವೆ ಸಕಾರಾತ್ಮಕ ವಾತಾವರಣವಿದ್ದಾಗ ಮಾತ್ರ ಇಂಥ ನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಪಾಕಿಸ್ಥಾನ ತಿಳಿಸಿದೆ. ಇದೇ ವಾರದ ಆರಂಭದಲ್ಲಿ, ಶಾರದಾ ಪೀಠ ಕಾರಿಡಾರ್‌ಗಾಗಿ ಭಾರತ ಸಲ್ಲಿಸಿದ್ದ ಪ್ರಸ್ತಾವನೆಗೆ ಪಾಕಿಸ್ಥಾನ ಸರಕಾರ ಒಪ್ಪಿದೆ ಎಂದು ಪಾಕಿಸ್ಥಾನದ “ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ವರದಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next