ಕನ್ನಡ ಚಿತ್ರರಂಗದಲ್ಲಿ ಈಗ ಚಿತ್ರ-ವಿಚಿತ್ರ ಟೈಟಲ್ ಗಳ ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಖಾಲಿ ಡಬ್ಬ’. ಹೀಗೊಂದು ಸಿನಿಮಾ ಆರಂಭವಾಗಿದ್ದು, ಇತ್ತೀಚೆಗೆ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ಪ್ರಕಾಶ್ ಕೆ ಅಂಬ್ಳೆ ಈ ಚಿತ್ರದ ನಿರ್ದೇಶಕರು. ಮಂಜು ಗುರಪ್ಪ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ರಾಮ್ ಗುಡಿ ನಾಯಕನಾಗಿ ನಟಿಸಿದ್ದಾರೆ. ಆದ್ಯಾ ಪ್ರಿಯಾ ಹರಿತಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಕಾಶ್, “ಈ ಸಿನಿಮಾದಲ್ಲಿ ಖಾಲಿ ಡಬ್ಬ ಕೂಡ ಒಂದು ಪಾತ್ರ. ವಯಸ್ಸು, ಸಮಯ ಮೀರಿದರೆ ಪ್ರತಿಯೊಬ್ಬರ ಲೈಫು ಖಾಲಿ. ಹೀಗಾಗಿ ಚಿತ್ರಕ್ಕೆ ಖಾಲಿ ಡಬ್ಬ ಎಂದು ಹೆಸರು ಇಡಲಾಗಿದೆ. ಈ ಹಿಂದೆ ಹತ್ತು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ಈ ಅನುಭವದಿಂದ ಈಗ ನಿರ್ದೇಶನಕ್ಕಿಳಿದಿದ್ದೇನೆ. ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ. ಐದು ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದ್ದಾರೆ’ ಎಂದರು.
“ಖಾಲಿ ಡಬ್ಬ ಟೈಟಲ್ ಇಟ್ಟಾಗಲೇ ನೆಗೆಟಿವ್ ಮಾತುಗಳು ಕೇಳಿಬಂದವು. ಇನ್ನೂ ಕೆಲವರು ಚೆನ್ನಾಗಿದೆ ಎಂದರು. ಮೂಲ ಕಥೆಗಾರರು ಜೀವನವೊಂದು ಖಾಲಿ ಡಬ್ಬ ಅಂತಾ ಇಡೀ ಎಂದರು.
ಇದು ಕೇವಲ ಸಿನಿಮಾವಲ್ಲ. ತೇರು ಇದ್ದಂಗೆ. ಎಲ್ಲರೂ ಕೈ ಜೋಡಿಸಿದರು. ಸರಿಯಾದ ಸಮಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಮಾತ್ರ ಜೀವನವೆಂಬ ಡಬ್ಬ ತುಂಬುತ್ತದೆ, ಇಲ್ಲ ಎಂದರೆ ಜೀವನೇ ಖಾಲಿ ಡಬ್ಬವಾಗುತ್ತದೆ’ ಎನ್ನುವುದು ನಾಯಕ ರಾಮ್ ಮಾತು.
ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ವಿ.ನಾಗೇಂದ್ರ ಪ್ರಸಾದ್ ಮಾತನಾಡಿ, “ಡೈರೆಕ್ಟರ್ ಹೇಳಿದಂತೆ ಸಿನಿಮಾದಲ್ಲಿ ಖಾಲಿ ಡಬ್ಬ ಅಕ್ಷರಶಃ ಪಾತ್ರ. ಡಬ್ಬವನ್ನು ಸಂಕೇತವಾಗಿ ಇಟ್ಟುಕೊಂಡು ಕಥೆ ಹೇಳ ಲಾಗಿದೆ. ಎಮೋಷನಲ್, ಲವ್, ಫ್ಯಾಮಿಲಿ ಎಲ್ಲಾ ಇರುವಂತಹ ಕಥೆ. ಕಾಲ್ಪನಿಕ ಅನಿಸಿದರೂ ವಾಸ್ತವ ಅನಿಸುವ ಕಥೆ ಚಿತ್ರದಲ್ಲಿದೆ. ಈ ಸಿನಿಮಾ ದಲ್ಲಿ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ’ ಎಂದರು. “ಖಾಲಿ ಡಬ್ಬ’ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಬೆಂಗಳೂರು, ಮಂಡ್ಯ, ಮೈಸೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.