ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳ ಪೊಲೀಸ್ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಗಣನೀಯವಾಗಿದೆ ಎಂದಿರುವ ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು, ಆಯಾ ರಾಜ್ಯ ಸರ್ಕಾರಗಳಿಂದ ಆಗುತ್ತಿರುವ ಮಂದಗತಿಯ ನೇಮಕಾತಿ, ನಿವೃತ್ತಿ ನಂತರ ಆ ಜಾಗಕ್ಕೆ ಮರು ನೇಮಕಾತಿ ಆಗದಿರುವುದು ಹಾಗೂ ಸಿಬ್ಬಂದಿಯ ಅಕಾಲಿಕ ಮರಣಗಳು ಈ ಕೊರತೆಗೆ ಕಾರಣ ಎಂದಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 1,00,243 ಹುದ್ದೆಗಳಿದ್ದು, ಅದರಲ್ಲಿ 21,943 ಹುದ್ದೆಗಳು ಖಾಲಿಯಿವೆ. 78,300 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಾಗೆಯೇ, ತೆಲಂಗಾಣ, ಜಾರ್ಖಂಡ್, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ಛತ್ತೀಸ್‌ಗಡ, ಹರ್ಯಾಣ, ಒಡಿಶಾ, ಅಸ್ಸಾಂ ಹಾಗೂ ಜಮ್ಮು ಕಾಶ್ಮೀರಗಳಲ್ಲಿಯೂ ಸಾವಿರಾರು ಹುದ್ದೆಗಳು ಖಾಲಿ ಇವೆ ಎಂದು ಅವರು ಹೇಳಿದ್ದಾರೆ.
ಟಾಪ್ ಮೂರು ರಾಜ್ಯಗಳು: ಅತಿ ಹೆಚ್ಚು ಸಿಬ್ಬಂದಿ ಕೊರತೆಯಿರುವ ಟಾಪ್ 3 ರಾಜ್ಯಗಳೆಂದರೆ – ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ. ಉತ್ತರ ಪ್ರದೇಶಕ್ಕೆ ಮುಂಜೂರಾಗಿರುವ ಪೊಲೀಸ್ ಹುದ್ದೆಗಳ ಸಂಖ್ಯೆ 4,14,492. ಆದರೆ, ಪ್ರಸ್ತುತ ಅಲ್ಲಿ 2,85,540 ಸಿಬ್ಬಂದಿಯಿದ್ದು, 1,29,952 ಸಿಬ್ಬಂದಿ ಕೊರತೆಯಿದೆ. ಬಿಹಾರದಲ್ಲಿ, ಒಟ್ಟು 77,995 ಹುದ್ದೆಗಳಿಗೆ ಪ್ರತಿಯಾಗಿ 1,28,286 ಸಿಬ್ಬಂದಿಯಿದ್ದು, 50,291 ಹುದ್ದೆಗಳು ಖಾಲಿ ಇವೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು 1,40,904 ಹುದ್ದೆಗಳಲ್ಲಿ 48,981 ಸಿಬ್ಬಂದಿ ಕೊರತೆಯಿದೆ. ಆದರೆ, ನಾಗಾಲ್ಯಾಂಡ್‌ನಲ್ಲಿ ಮಾತ್ರ ಒಟ್ಟು 21,292 ಹುದ್ದೆಗಳಿಗೆ ಹೆಚ್ಚುವರಿಯಾಗಿ 921 ಹೆಚ್ಚು ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.