ಹುಬ್ಬಳ್ಳಿ: ಯುವಕರು ಖಾದಿ ಬಟ್ಟೆ ಧರಿಸಲು ಮುಂದಾದರೆ ನೇಕಾರರ ಬದುಕು ಹಸನಾಗುತ್ತದೆ ಎಂದು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು. ಇಲ್ಲಿನ ಗೋಕುಲ ರಸ್ತೆಯ ಡಾ| ಕೆ.ಎಸ್. ಶರ್ಮಾ ಸಭಾಭವನದಲ್ಲಿ ಐಇಎಂಎಸ್ ಬಿ-ಸ್ಕೂಲ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಖಾದಿ ಉತ್ಸವದಲ್ಲಿ ಅವರು ಮಾತನಾಡಿದರು.
ಯುವಕರಲ್ಲಿ ಸ್ವದೇಶಿ ವಸ್ತುಗಳ ಬಳಕೆ ಕುರಿತು ಜಾಗೃತಿ ಮೂಡಿಸುವ ಮೂಲಕ ಖಾದಿ ಬಟ್ಟೆಗಳನ್ನು ಬಳಕೆ ಮಾಡುವಂತೆ ಪ್ರೇರೇಪಿಸಬೇಕು. ವಿದೇಶಿ ವ್ಯಾಮೋಹಕ್ಕೆ ಬಲಿಯಾಗದೆ ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಖಾದಿ ಬಟ್ಟೆಯನ್ನು ಧರಿಸುವ ಮೂಲಕ ನೇಕಾರರ ಕೆಲಸಕ್ಕೆ ಪ್ರೋತ್ಸಾಹ ನೀಡಬೇಕು. ಅಧಿಕಾರದಲ್ಲಿ ಇರುವವರು ಮಾದರಿಯಾಗಿರಬೇಕು.
ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಆಸಕ್ತಿ ಇರಬೇಕು ಎಂದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಚೀನಾ ದೇಶದ ಉತ್ಪನ್ನಗಳು ಕಡಿಮೆ ದರದಲ್ಲಿ ದೊರೆಯುತ್ತವೆ ಎನ್ನುವ ಕಾರಣಕ್ಕೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಚೀನಾ ವಸ್ತುಗಳನ್ನು ಖರೀದಿಸದಂತೆ ಜಾಗೃತಿ ಮೂಡಿಸುವ ಕಾರ್ಯ ಹೆಚ್ಚಾಗಬೇಕು.
ಬ್ರ್ಯಾಂಡೆಂಡ್ ಎನ್ನುವ ಮೋಹಕ್ಕೆ ಬಲಿಯಾಗಬೇಡಿ. ನಮ್ಮ ರಾಷ್ಟ್ರದ ಗುಡಿ ಕೈಗಾರಿಕೆಗಳ ಮೇಲೆ ಲಕ್ಷಾಂತರ ಕುಟುಂಬಗಳು ಅವಲಂಬಿತವಾಗಿವೆ. ಗುಡಿ ಕೈಗಾರಿಕೆ ಹಾಗೂ ದೇಶಿ ಉತ್ಪನ್ನಗಳನ್ನು ಪರಿಚಯಿಸುವ ಹಾಗೂ ಖರೀದಿಸುವಂತಹ ಇಂತಹ ಉತ್ಸವಗಳು ಹೆಚ್ಚಾಗಬೇಕು.
ಗುಡಿ ಕೈಗಾರಿಕಗಳಲ್ಲಿನ ನವೋದ್ಯಮಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಈ ಉತ್ಸವ ಅರ್ಥಪೂರ್ಣವಾಗಿದೆ ಎಂದರು. ಕಾರ್ಮಿಕರ ಮುಖಂಡ ಡಾ| ಕೆ.ಎಸ್.ಶರ್ಮಾ, ಲೆಕ್ಕಪರಿಶೋಧಕ ಡಾ| ಎನ್.ಎ. ಚರಂತಿಮಠ, ಐಇಎಂಎಸ್ ಬಿ-ಸ್ಕೂಲ್ ನಿರ್ದೇಶಕ ಡಾ| ಶ್ರೀನಿವಾಸ ಪಾಟೀಲ, ನವೋದ್ಯಮಿ ರಾಜೇಶ್ವರಿ, ವೆಂಕನಗೌಡ ಇತರರಿದ್ದರು.