ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಇನ್ನು ಮುಂದೆ ಖಾದಿ ಖದರು ಆರಂಭವಾಗಿದೆ. ಘಟಿಕೋತ್ಸವಗಳಲ್ಲಿ ಬಳಸುವ ನಿಲುವಂಗಿಗಳನ್ನು ಖಾದಿ ಬಟ್ಟೆಯಿಂದಲೇ ಸಿದ್ಧಪಡಿಸಲಾಗುತ್ತದೆ.
ಈ ಹಿಂದೆ ಈ ಗೌನ್‌ಗಳನ್ನು ಇಂಥದ್ದೇ ಬಟ್ಟೆಗಳಿಂದ ಸಿದ್ಧ ಪಡಿಸಬೇಕು ಎಂಬ ನಿಯಮ ಇರಲಿಲ್ಲ. ವಿ.ವಿ. ಆಡಳಿತ ಮಂಡಳಿ ಆರ್ಥಿಕ ಅನುಕೂಲತೆಗೆ ತಕ್ಕಂತೆ ಗೌನ್‌ಗಳನ್ನು ತಯಾರಿಸಿಕೊಳ್ಳುತ್ತಿತ್ತು. ಆದರೆ ಇನ್ನು ಮುಂದೆ ಖಾದಿ ಗೌನ್‌ಗಳನ್ನೇ ಬಳಸಬೇಕು ಎಂಬ ಬಗ್ಗೆ ವಿ.ವಿ. ಅನುದಾನ ಆಯೋಗ (ಯುಜಿಸಿ) ಸ್ಪಷ್ಟ ನಿರ್ದೇಶನ ನೀಡಿದೆ.
ಘಟಿಕೋತ್ಸವ ಭಾಷಣ ಮಾಡುವವರ ಸಹಿತ ವಿ.ವಿ. ಆಡಳಿತ ಮಂಡಳಿ ಸದಸ್ಯರು, ಗೌರವ ಡಾಕ್ಟರೇಟ್ ಪಡೆಯುವವರು, ಪಿಎಚ್‌ಡಿ ಮತ್ತು ವಿವಿಧ ಪದವಿ, ಸ್ನಾತಕೋತ್ತರ ಪದವಿಗಳನ್ನು ಸ್ವೀಕರಿಸು ವವರು ಗೌನ್‌ಗಳನ್ನು ಧರಿಸುತ್ತಾರೆ. ಇವುಗಳನ್ನು ವಿ.ವಿ.ಯಿಂದಲೇ ಒದಗಿಸಲಾಗುತ್ತದೆ. ಕೆಲವು ಕಡೆ ವಿದ್ಯಾರ್ಥಿ ಗಳೇ ಅಥವಾ ಪ್ರತ್ಯೇಕ ವ್ಯವಸ್ಥೆ ಮೂಲಕ ಒದಗಿ ಸುವ ಪದ್ಧತಿಯೂ ಇದೆ. ಹೀಗಾಗಿ ನಿರ್ದಿಷ್ಟ ಗುಣ ಮಟ್ಟ ಅಥವಾ ಬಟ್ಟೆಯ ಬಗ್ಗೆ ಕಟ್ಟುನಿಟ್ಟಿನ ನಿಯಮ ಇರಲಿಲ್ಲ. ಈಗ ಖಾದಿ ಬಟ್ಟೆಯ ಗೌನ್‌ಗಳನ್ನೇ ಉಪ ಯೋಗಿಸಬೇಕಾಗಿರುವುದರಿಂದ ಆಯಾ ವಿ.ವಿ.ಗಳೇ ವ್ಯವಸ್ಥೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಯುಜಿಸಿ ನಿರ್ದೇಶನ :
ವಿ.ವಿ. ಅನುದಾನ ಆಯೋಗ (ಯುಜಿಸಿ)ಯು ವಿ.ವಿ.ಗಳಲ್ಲಿ ಖಾದಿ ಮತ್ತು ಕೈಮಗ್ಗದ ಬಟ್ಟೆಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದು 2019ರಲ್ಲೇ ನಿರ್ದೇಶನ ನೀಡಿತ್ತು. ಅನಂತರ ಕೋವಿಡ್ ವ್ಯಾಪಿಸಿದ್ದರಿಂದ ಬಹುತೇಕ ವಿ.ವಿ.ಗಳು 2020ರಲ್ಲಿ ಘಟಿಕೋತ್ಸವ ನಡೆಸಿಲ್ಲ. ಈಗ ಶೈಕ್ಷಣಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ತಲುಪುತ್ತಿವೆ.
ಯುಜಿಸಿ ನಿರ್ದೇಶನದಂತೆ ಖಾದಿ ಗೌನ್‌ಗಳನ್ನು ಸಿದ್ಧಪಡಿಸಿದ್ದೇವೆ. ಇದೇ ಮೊದಲ ಬಾರಿಗೆ ಖಾದಿ ಗೌನ್ ಬಳಕೆಯಾಗುತ್ತಿದೆ. ಇದು ಖಾದಿ ಮತ್ತು ಕೈಮಗ್ಗಗಳಿಗೆ ಉತ್ತೇಜನ ನೀಡಲಿದೆ.
–ಪ್ರೊ| ಕೆ.ಆರ್. ವೇಣುಗೋಪಾಲ್ ಬೆಂಗಳೂರು ವಿ.ವಿ. ಕುಲಪತಿ