Advertisement

ಶಿಕ್ಷಣ: ಸ್ಪಷ್ಟ ನೀತಿಗೆ ಖಾದರ್‌ ಆಗ್ರಹ

11:04 PM Sep 07, 2020 | mahesh |

ಮಂಗಳೂರು: ಕೋವಿಡ್‌ ಕಾರಣದಿಂದ ಸೂಕ್ತ ವೇತನವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿರುವ ಶಿಕ್ಷಕರ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಗಮನ ಹರಿಸುತ್ತಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಸರಕಾರ ಖಚಿತ ನಿಲುವು ಹೊಂದಿಲ್ಲ ಎಂದು ಟೀಕಿಸಿರುವ ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್‌ ಅವರು ಶಿಕ್ಷಣದ ಬಗ್ಗೆ ಸ್ಪಷ್ಟವಾದ ನೀತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

ನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿ ಯಲ್ಲಿ ಪತ್ರಿಕಾಗೋಷ್ಠಿ ಯನ್ನು ದೇಶಿಸಿ ಮಾತನಾಡಿದ ಅವರು, ಕೋವಿಡ್ ಸಮಸ್ಯೆಯಿಂದಾಗಿ ಶಿಕ್ಷಕರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಕ ವೃತ್ತಿ ಬಿಟ್ಟು ತರಕಾರಿ ಅಂಗಡಿ ಮುಂತಾದ ಪರ್ಯಾಯ ವೃತ್ತಿ ನಡೆಸು ವಂತಾಗಿದೆ. ಸರಕಾರ ಅವರನ್ನು ಅವಗಣಿಸುತ್ತಾ ಬಂದಿದ್ದು ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬೀದಿ ಪಾಲಾಗಿರುವ ಶಿಕ್ಷಕರ ಬಗ್ಗೆ ಸಚಿವರು ಮೌನವಾಗಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಶಿಕ್ಷಕ ವರ್ಗಕ್ಕೆ ನೆರವಾಗುವ ಬದಲು ಶಿಕ್ಷಣ ಸಚಿವರು ಶಾಲಾರಂಭದ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದವರು ಹೇಳಿದರು.

ನಿಖರತೆಯೇ ಇಲ್ಲ
ಯಾವ ತರಗತಿಗೆ ಯಾವ ಪಠ್ಯ ಎಂಬ ನಿಖರತೆಯೂ ಶಾಲೆಗಳಲ್ಲಿ ಇಲ್ಲ. ಒಂದೊಂದು ತರಗತಿಗೆ ಒಂದೊಂದು ಪಠ್ಯವನ್ನು ಬೋಧಿಸಲಾಗುತ್ತಿದೆ ಎಂದ ಅವರು, ಅಕ್ಟೋಬರ್ ನಿಂದ ತರಗತಿ ಆರಂಭಿಸಿ ಮೇ ತಿಂಗಳಿಗೆ ಮುಕ್ತಾಯವಾಗಲು ಅನುವು ಆಗುವಂತೆ ಪಠ್ಯ ಕಡಿತ ಮಾಡಬೇಕು. ಶಿಕ್ಷಣದ ಹೊರೆಯನ್ನು ಕಡಿಮೆ ಮಾಡಬೇಕು. ವಿದ್ಯಾರ್ಥಿ ಸ್ನೇಹಿ ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಿಸಬೇಕು. ವಿದ್ಯಾರ್ಥಿ ಗಳಿಗೆ ಕೌನ್ಸೆಲಿಂಗ್‌ ವ್ಯವಸ್ಥೆ ಮಾಡಬೇಕು ಎಂದು ಆಗ್ರಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿ’ಸೋಜಾ, ಮುಖಂಡರಾದ ಸದಾಶಿವ ಉಳ್ಳಾಲ, ಎ.ಸಿ. ವಿನಯರಾಜ್‌, ಅಪ್ಪಿ, ಪ್ರವೀಣ್‌ಚಂದ್ರ ಆಳ್ವ ಉಪಸ್ಥಿತರಿದ್ದರು.

ಐಟಿ ಕಚೇರಿ ವಿಲೀನ: ಜನಪ್ರತಿನಿಧಿಗಳ ಮೌನವೇಕೆ?
ಮಂಗಳೂರಿನಲ್ಲಿರುವ ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿಯನ್ನು ಗೋವಾದ ಕಚೇರಿ ಜತೆ ವಿಲೀನಗೊಳಿಸಲು ಸಿದ್ಧತೆ ನಡೆಯುತ್ತಿದೆ. ಇದರ ಬಗ್ಗೆ ಅರಿವು ಹೊಂದಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಮೌನ ತಾಳಿರುವುದಕ್ಕೆ ಕಾರಣ ಏನು ಎಂದು ಯು.ಟಿ. ಖಾದರ್‌ ಪ್ರಶ್ನಿಸಿದರು. ಮಂಗಳೂರು ಕಚೇರಿ ವ್ಯಾಪ್ತಿಗೆ ದ.ಕ., ಉಡುಪಿ, ಕಾರವಾರ ಜಿಲ್ಲೆಗಳು ಬರುತ್ತವೆ. ಅನೇಕ ಉದ್ದಿಮೆಗಳು ಇಲ್ಲಿವೆ. ಬೆಂಗಳೂರು ಹೊರತುಪಡಿಸಿದರೆ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುವ ಜಿಲ್ಲೆ ಇದು. ಹುಬ್ಬಳ್ಳಿಯ ಐಟಿ ಕಚೇರಿ ಸ್ಥಳಾಂತರಕ್ಕೆ ಇದೇ ರೀತಿ ಯತ್ನಿಸಿದಾಗ ಅಲ್ಲಿಯವರು ಸೇರಿ ತಡೆದಿದ್ದಾರೆ. ಹಾಗಿರುವಾಗ ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಪಕ್ಷದ ಶಾಸಕರು, ಸಂಸದರು ಇರುವಾಗ ಅವರಿಗೆ ಯಾಕೆ ಕಚೇರಿ ಸ್ಥಳಾಂತರ ತಡೆಯಲು ಮುಂದಾಗುತ್ತಿಲ್ಲ ಎಂದು ಖಾದರ್‌ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next