ಕಳೆದ ಐದಾರು ವರ್ಷಗಳಿಂದಲೂ ಚಿತ್ರರಂಗದಿಂದ ದೂರವೇ ಉಳಿದಿದ್ದ ನಿರ್ದೇಶಕ ಶರಣ್ ಕಬ್ಬೂರು, ಈಗ “ಖಾಲಿದೋಸೆ’ ಉಣಬಡಿಸಲು ಬಂದಿದ್ದಾರೆ. ಹೀಗೆಂದಾಕ್ಷಣ, ಇನ್ನೇನೋ ಅರ್ಥ ಕಲ್ಪಿಸಿಕೊಳ್ಳಬೇಕಿಲ್ಲ. ಹೌದು, ಶರಣ್ ಕಬ್ಬೂರು ಈ ಹಿಂದೆ ಐದು ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದವರು. ಈಗ ತಮ್ಮ “ಖಾಲಿದೋಸೆ ಕಲ್ಪನ’ ಸಿನಿಮಾ ಮೂಲಕ ಮತ್ತೆ ಬಂದಿದ್ದಾರೆ. ಇತ್ತೀಚೆಗೆ ಚಿತ್ರಕ್ಕೆ ಚಾಲನೆಯೂ ಸಿಕ್ಕಿದೆ. ಚಿತ್ರದ ಕುರಿತು ಶರಣ್ ಕಬ್ಬೂರು ಹೇಳಿದ್ದಿಷ್ಟು.
“ನಾನು ಸ್ವಲ್ಪ ಗ್ಯಾಪ್ ಪಡೆದು ಉದ್ಯಮದ ಕಡೆ ಮುಖ ಮಾಡಿದ್ದೆ. ಈಗ ಹೊಸ ಕಥೆ ಮೂಲಕ ಬರುತ್ತಿದ್ದೇನೆ. “ಖಾಲಿದೋಸೆ ಕಲ್ಪನ’ ಇದು ನೈಜ ಘಟನೆಯ ಚಿತ್ರ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದ ಫ್ಯಾಮಿಲಿಯೊಂದು ಶಿವಮೊಗ್ಗ ಜಿಲ್ಲೆಯ ಊರಲ್ಲೊಂದು ಹೋಟೆಲ್ ಇಟ್ಟುಕೊಂಡು ಕೆಲಸ ನಡೆಸುತ್ತಿರುತ್ತೆ. ಆ ಹೊಟೇಲ್ ಮನೆಯಲ್ಲೊಂದು ಬಲಿ ಕೊಟ್ಟರೆ, ಒಂದು ಬೆಲೆಬಾಳುವ ವಸ್ತು ಸಿಗುತ್ತೆ ಅನ್ನುವ ಅಂಶ ಗೊತ್ತಾದಾಗ, ಆಮೇಲೆ ಏನಾಗುತ್ತೆ ಅನ್ನೋದೇ ಒನ್‌ಲೈನ್. ಇದೊಂದು ಥ್ರಿಲ್ಲರ್, ಕಾಮಿಡಿ, ಎಮೋಶನಲ್, ಹಾರರ್ ಟಚ್ ಇರುವ ಕಥೆ. ತನಿಖೆಯ ಸುತ್ತ ಸಾಗುವ ಅಂಶಗಳು ಇಲ್ಲಿವೆ. ಶಿವಮೊಗ್ಗ ಜಿಲ್ಲೆ, ಉತ್ತರ ಕರ್ನಾಟಕ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ’ ಎಂದರು ಶರಣ್ ಕಬ್ಬೂರು.
ಚಿತ್ರದಲ್ಲಿ ಶುಭಾಪೂಂಜಾ ಪ್ರಮುಖ ಆಕರ್ಷಣೆ. ಹಾಗಾದರೆ, ಅವರೇ ಇಲ್ಲಿ ಕಲ್ಪನ ಪಾತ್ರ ನಿರ್ವಹಿಸುತ್ತಿದ್ದಾರಾ? ಇದಕ್ಕೆ ಉತ್ತರಿಸುವ ಶುಭಾ, “ನಾನಿಲ್ಲಿ ಸಿನಿಮಾದೊಳಗೆ ಸಿನಿಮಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಕಲ್ಪನ ನಾನಾ ಅಥವಾ ಬೇರೆ ಯಾರಾದರು ಇದ್ದಾರಾ ಅನ್ನೋದ್ದಕ್ಕೆ ಸಿನಿಮಾ ನೋಡಬೇಕು. ಒಂದೊಳ್ಳೆಯ ಮನರಂಜನೆ ಅಂಶಗಳು ಇಲ್ಲಿವೆ. ಕಳೆದ 9 ವರ್ಷಗಳ ಹಿಂದೆಯೇ ನಾನು ಶರಣ್ ಸರ್ ಅವರ “ಹನಿ ಹನಿ’ ಚಿತ್ರದಲ್ಲಿ ನಟಿಸಬೇಕಿತ್ತು. ಆಗ, ಬೇರೊಂದು ಚಿತ್ರದಲ್ಲಿದ್ದರಿಂದ ಡೇಟ್ ಸಮಸ್ಯೆಯಾಗಿ, ಮಾಡಲು ಸಾಧ್ಯವಾಗಿರಲಿಲ್ಲ. ಈಗ ಅವರ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದರು ಶುಭ.
ಸಂಜಯ್ ಗೌಡ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. “ಕಥೆ ಕೇಳಿದಾಗ, ಇಷ್ಟವಾಯ್ತು. ಆರು ತಿಂಗಳ ಕಾಲ ನಾನು ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡೆ. ಸಾಧ್ಯವಾದಷ್ಟು ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡ್ತೀನಿ. ಮೊದಲ ಹೆಜ್ಜೆ ಇದು. ಹಾಗಾಗಿ ನಿಮ್ಮೆಲ್ಲರ ಸಹಕಾರ, ಬೆಂಬಲ, ಪ್ರೋತ್ಸಾಹ ಇರಲಿ’ ಎಂದರು ಅವರು.
ಅಭಿಮನ್ ರಾಯ್ ಸಂಗೀತ ನೀಡಿದ್ದು, ಅವರಿಗೆ ಶರಣ್ ಕಬ್ಬೂರು ಜೊತೆಗೆ ಇದು 3 ನೇ ಕಾಂಬಿನೇಷನ್ ಸಿನಿಮಾವಂತೆ. ಕಥೆ ಚೆನ್ನಾಗಿದೆ. ಹಾಡುಗಳು ಸಹ ಹೊಸತನದಿಂದ ಕೂಡಿವೆ. ರಾಜೇಶ್ ಸಂಭಾಷಣೆ ಜೊತೆ ಗೀತೆ ರಚಿಸಿದ್ದಾರೆ. ಈ ರೀತಿಯ ಚಿತ್ರಗಳಲ್ಲಿ ಕೆಲಸ ಮಾಡಲು ಖುಷಿಯಾಗುತ್ತಿದೆ. ಒಳ್ಳೆಯ ತಂಡದಿಂದ ಒಳ್ಳೆಯ ಸಿನಿಮಾ ಬರುತ್ತೆ ಎಂಬ ವಿಶ್ವಾಸ ನನ್ನದು’ಎಂದರು ಅಭಿಮಾನ್ ರಾಯ್.
ಸಂಭಾಷಣೆ ಮತ್ತು ಹಾಡು ಬರೆದಿರುವ ರಾಜೇಶ್, “ನಾನೊಂದು ದಿನ ನಿರ್ದೇಶಕರ ಜೊತೆ ಈ ಕಥೆ ಕೇಳಿದೆ. ಚೆನ್ನಾಗಿತ್ತು. ಅವರು ನೀನೇ ಸಂಭಾಷಣೆ ಬರೆಯಬೇಕು ಅಂದರು. ಆ ಜವಾಬ್ದಾರಿಯನ್ನು ನೀಟ್ ಆಗಿ ನಿಭಾಯಿಸುವ ನಂಬಿಕೆ ಇದೆ’ ಎಂದರು ರಾಜೇಶ್. ನಿರ್ಮಾಪಕರಾದ ನಳಿನ ಗೌಡ, ರಾಜೇಶ್, ಮೇಘನಾ ಶಿವರಾಜ್ ರವಿಕುಮಾರ್ ಸಿನಿಮಾ ಕುರಿತು ಮಾತಾಡಿದರು. ಈ ಪೈಕಿ ರವಿಕುಮಾರ್ ಇಲ್ಲಿ ಒಂದು ಪಾತ್ರ ನಿರ್ವಹಿಸುತ್ತಿದ್ದು, ಸಿನಿಮಾದೊಳಗೂ ನಿರ್ಮಾಪಕರಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.