ಬೆಂಗಳೂರು : ಕೆಜಿಎಫ್ ಸಿನಿಮಾ ರಿಲೀಸ್ ಆದ ಮೇಲೆ ಯಾಶ್ ಅಭಿಮಾನಿ ಬಳಗ ಪ್ರಪಂಚದಾದ್ಯಂತ ಬೆಳೆಯ ತೊಡಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದ ನಾನಾ ದೇಶಗಳ ಯಶ್ ಅಭಿಮಾನಿಗಳು ಕೆಜಿಎಫ್ ಚಾಪ್ಟರ್ 2 ಸಿನಿಮಾ ಬರುವಿಕೆಗಾಗಿ ಕಾಯುತ್ತಿದ್ದಾರೆ. ಅಲ್ಲದೆ ತಮ್ಮ ಅಭಿಮಾನವನ್ನು ವಿಶೇಷ ರೀತಿಯಲ್ಲಿ ಮೆರೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇದೆ ನೇಪಾಳದ ಯಶ್ ಅಭಿಮಾನಿ ಮಾಡಿರುವ ಈ ಕಾರ್ಯ.
ಪ್ರಶಾಂತ್ ನೀಲ್ ನಿರ್ದೇಶನದ ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿ ಹೊರ ಹೊಮ್ಮಿದೆ. ಮುಂಬರುವ ಜುಲೈ 16ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಇತ್ತಿಚೆಗೆ ಚಿತ್ರದ ಡಬ್ಬಿಂಗ್ ಕಾರ್ಯ ಕೂಡ ಶುರುವಾಗಿದೆ. ಇದೇ ಹಿನ್ನೆಲೆಯಲ್ಲಿ ನೇಪಾಳದ ಅಭಿಮಾನಿ ಮಾಡಿರುವ ಈ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು ನೇಪಾಳ ದೇಶದ ಯಶ್ ಅಭಿಮಾನಿಯೊಬ್ಬ ತನ್ನ ಲಾರಿ ಮೇಲೆ ‘KGF 2 coming soon’ ಎಂದು ಬರೆದುಕೊಂಡಿದ್ದಾರೆ. ಇದು ಸಿನಿಮಾ ತಂಡ ಮಾಡುತ್ತಿರುವ ಪ್ರಚಾರವಲ್ಲ. ಆ ಅಭಿಮಾನಿಯೇ ಸಿನಿಮಾವನ್ನು ಇಷ್ಟ ಪಟ್ಟು ಈ ರೀತಿ ಬರೆಸಿಕೊಂಡಿದ್ದಾರೆ.
ಈ ದೃಶ್ಯವನ್ನು ನೋಡಿದ ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಾಕಿಕೊಂಡು ಖುಷಿ ಪಡುತ್ತಿದ್ದಾರೆ. ಇತ್ತಿಚೆಗೆ ಕೆಜಿಎಫ್ 2 ಟೀಸರ್ ರಿಲೀಸ್ ಆಗಿದ್ದು 17.8 ಕೋಟಿ ಬಾರಿ ವೀಕ್ಷಣೆ ಪಡೆದಿದೆ.