Advertisement

ಅಶೋಕ ನಗರ ರಸ್ತೆ ಅಗಲೀಕರಣಕ್ಕೆ ಕ್ರಮ

05:29 PM Sep 28, 2019 | Team Udayavani |

ಕೆಜಿಎಫ್: ಅಶೋಕ ನಗರ ರಸ್ತೆ ಅಗಲೀಕರಣ ಮಾಡಲು ಸಹಮತ ಇರುವ ಕಟ್ಟಡ ಮಾಲಿಕರ ಅನುಮತಿ ಪತ್ರ ಪಡೆದು ತೆರವು ಮಾಡಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಮಂಜುನಾಥ್‌ ಸೂಚಿಸಿದರು.

Advertisement

ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ರಸ್ತೆಯ ಎರಡೂ ಬದಿಯಲ್ಲಿ 25 ಮೀಟರ್‌ ಅಗಲೀಕರಣವಾಗಬೇಕು. ಬಹಳಷ್ಟು ಕಡೆ ಅಕ್ರಮ ಕಟ್ಟಡ ನಿರ್ಮಾಣ ಮಾಡಲಾಗಿದೆ. ಎರಡು ಕಿ.ಮೀ. ರಸ್ತೆ ಅಗಲೀಕರಣ ಸಂಪೂರ್ಣವಾಗಲು 230 ಮೀಟರ್‌ ಬಾಕಿ ಇದೆ ಎಂದರು.

ಆರು ಬಾರಿ ವಿಚಾರಣೆ: ಕೆಲವು ಮಂದಿ ಸ್ವಯಂಪ್ರೇರಿತರಾಗಿ ಕಟ್ಟಡವನ್ನು ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಉಳಿದವರು ಹೈಕೋರ್ಟಿಗೆ ಹೋಗಿದ್ದರು. ಕೋರ್ಟಿನಿಂದ ಕಟ್ಟಡ ಮಾಲಿಕರ ವೈಯಕ್ತಿಕ ವಿವರ ಮತ್ತು ಹೇಳಿಕೆ ಪಡೆದುಕೊಂಡು ನಿರ್ಧಾರ ತೆಗೆದುಕೊಳ್ಳುವಂತೆ ಸೂಚನೆ ಬಂದಿದೆ.

ಅದರಂತೆ 15 ಮಂದಿಯನ್ನು ಆರು ಬಾರಿ ವಿಚಾರಣೆ ನಡೆಸಲಾಗಿದೆ. ಶೀಘ್ರದಲ್ಲಿಯೇ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು. ಮನವೊಲಿಕೆ ಮಾಡಿ: ಈ ಮಧ್ಯೆ ಕಟ್ಟಡ ಬಿಟ್ಟುಕೊಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿರುವವರ ಬಳಿ ಒಪ್ಪಿಗೆ ಪತ್ರ ಪಡೆದುಕೊಂಡು ಕಟ್ಟಡ ತೆರವು ಮಾಡಬೇಕು. ಕೋರ್ಟಿಗೆ ಹೋದವರನ್ನೂ ಸ್ವಯಂಪ್ರೇರಿತರಾಗಿ ಬಿಟ್ಟುಕೊಡುವಂತೆ ಮನವೊಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಮ್ಮತಿ ಪತ್ರ: ಬಿ.ಎಂ.ರಸ್ತೆಯಲ್ಲಿ ಎಸ್‌ಬಿಎಂ ಪಕ್ಕದಲ್ಲಿರುವ ಪ್ರಿಯ ಬಾರ್‌ ಮುಂಭಾಗದ ರಸ್ತೆ ಒತ್ತುವರಿಯಾಗಿದೆ. ಅಲ್ಲಿ ಸಂಜಯಗಾಂಧಿ ನಗರಕ್ಕೆ ಹೋಗುವ ರಸ್ತೆಯನ್ನೂ ಒತ್ತುವರಿ ಮಾಡಲಾಗಿದೆ. ದಾಖಲೆ ಪರಿಶೀಲಿಸಿ ತೆರವು ಮಾಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು. ಇಲ್ಲಿರುವ ಬಾರ್‌ ವರ್ಗಾವಣೆ ಮಾಡಲು ಕೋರಿದ್ದಾರೆ.

ಅವರ ಸಮ್ಮತಿ ಪತ್ರ ಪಡೆದು ಕಾರ್ಯಾಚರಣೆ ನಡೆಸಲಾಗುವುದು. ಸ್ಥಳದಲ್ಲಿದ್ದ ನಗರಸಭೆ ಆಯುಕ್ತ ಸಿ.ರಾಜು ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತೆರವು ಮಾಡಿಕೊಟ್ಟರೆ, ನಗರಸಭೆಯಿಂದ ಫ‌ುಟ್‌ ಪಾತ್‌ ಮಾಡ್ತೇವೆ ಎಂದರು.

Advertisement

ಸ್ಥಳದಲ್ಲಿದ್ದ ಕೆಲವು ಕಾಂಗ್ರೆಸ್‌ ಮುಖಂಡರು ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೈಕೋರ್ಟ್‌ ಆದೇಶ ಮಾಡಿದ್ದರೂ, ಐದು ತಿಂಗಳ ನಂತರ ಆದೇಶದ ಪ್ರತಿ ತೆಗೆದುಕೊಂಡಿದ್ದಾರೆ  ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಇಇ ಬದರಿನಾಥ್‌, ಎಇಇ
ಅಮರಪ್ಪ, ಜೆಇ ಹನುಮಪ್ಪ, ಪಿಡಿ ರಂಗಸ್ವಾಮಿ, ಡಿವೈಎಸ್ಪಿ ಬಿ.ಎಲ್‌. ಶ್ರೀನಿವಾಸಮೂರ್ತಿ, ಎಇಇ ಶ್ರೀಧರ್‌, ಪರಿಸರ ಎಇ ರವೀಂದ್ರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next