ಬೆಂಗಳೂರು: ಕೆ.ಜಿ.ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್‌ರಾಜ್‌ಗಾಗಿ ಸಿಸಿಬಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಸಿಸಿಬಿ ಅಧಿಕಾರಿಗಳು ಸಂಪತ್‌ರಾಜ್‌ನ ಸಂಬಂಧಿಗಳು ಹಾಗೂ ಆತ ಚಿಕಿತ್ಸೆ ಪಡೆದಿದ್ದ ನಗರದ ಖಾಸಗಿ ಆಸ್ಪತ್ರೆಯ ಆರೇಳು ಮಂದಿ ವೈದ್ಯರನ್ನು ವಿಚಾರಣೆ ನಡೆಸಿದ್ದಾರೆ.
ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿದ ವೈದ್ಯರು ಮತ್ತು ಬಂಧುಗಳನ್ನು ಸುಮಾರು 5 ತಾಸುಗಳ ಕಾಲ ವಿಚಾರಣೆ ನಡೆಸಲಾಗಿದೆ.
ಸಂಪತ್‌ರಾಜ್ ಡಿಸ್ಚಾರ್ಜ್ ಆಗುವಾಗ ಯಾಕೆ ಸಿಸಿಬಿಗೆ ಮಾಹಿತಿ ನೀಡಿಲ್ಲ ಹಾಗೂ ಆತನಿಗೆ ಯಾವೆಲ್ಲ ಚಿಕಿತ್ಸೆ ನೀಡಲಾಗಿದೆ? ಚಿಕಿತ್ಸೆ ನೀಡಿದ್ದ ವೈದ್ಯರು ಯಾರು? ಡಿಸ್ಚಾರ್ಜ್ ಸಂದರ್ಭದಲ್ಲಿ ಯಾರಾದರೂ ಬೆದರಿಕೆ ಅಥವಾ ಆಮಿಷವೊಡ್ಡಿದ್ದರಾ ಮುಂತಾದ ಸಾಕಷ್ಟು ಪ್ರಶ್ನೆಗಳನ್ನು ವೈದ್ಯರಿಗೆ ಕೇಳಲಾಗಿದೆ. ವೈದ್ಯರ ಹೇಳಿಕೆಗಳು ಗೊಂದಲಮಯವಾಗಿದ್ದು, ಹೀಗಾಗಿ ಅಗತ್ಯವಿದ್ದರೆ ಮತ್ತೂಮ್ಮೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಹೇಳಿ ಕಳುಹಿಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ;ಹೇಡಿಯಂತೆ ಬಹಿರಂಗ ಚರ್ಚೆಯಿಂದ ಹೋಗಬೇಡಿ: ಈಶ್ವರ ಖಂಡ್ರೆ
ಬಾಲಸುಬ್ರಹ್ಮಣ್ಯ ವಿಚಾರಣೆ
ಸಂಪತ್‌ರಾಜ್‌ನ ಸಹೋದರಿಯ ಪತಿ ಬಾಲಸುಬ್ರಹ್ಮಣ್ಯ ಹಾಗೂ ಇತರರನ್ನು ವಿಚಾರಣೆಗೊಳಪಡಿಸಲಾಗಿದೆ. ಸಂಪತ್‌ರಾಜ್ ಆಸ್ಪತ್ರೆಯಲ್ಲಿದ್ದಾಗ ಬಾಲಸುಬ್ರಹ್ಮಣ್ಯ ಜತೆಯಲ್ಲಿದ್ದರು ಎನ್ನಲಾಗಿದೆ. ಎಲ್ಲ ಕುಟುಂಬ ಸದಸ್ಯರ ಮಾಹಿತಿ ಮತ್ತು ಮೊಬೈಲ್ ನಂಬರ್ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.