Advertisement

ಅರಳಗೋಡಿನಲ್ಲಿ ಮತ್ತೆ ಕೆಎಫ್‌ಡಿ ಸೋಂಕು ಪತ್ತೆ

04:54 PM Apr 30, 2022 | Niyatha Bhat |

ಸಾಗರ: ಗ್ರಾಪಂ ಸದಸ್ಯರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡ ಕಾರಣ ಅರಳಗೋಡು ಗ್ರಾಪಂ ಅಧ್ಯಕ್ಷ ಬಿ.ಆರ್. ಮೇಘರಾಜ್‌ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ, ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿದರು.

Advertisement

ಸಭೆಯಲ್ಲಿ ಅರಳಗೋಡು ಆಸ್ಪತ್ರೆಯ ವೈದ್ಯಾ ಧಿಕಾರಿ ಡಾ| ವೀರಭದ್ರಪ್ಪ ಗೌಡ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಶೇ. 90ರಷ್ಟು ರೋಗ ನಿರೋಧಕ ಲಸಿಕೆಗಳನ್ನು ಪ್ರಥಮ ಮತ್ತು ದ್ವಿತೀಯ ಹಂತದಲ್ಲಿ ನೀಡಲಾಗಿದೆ. ಶೇ 75ರಷ್ಟು ಬೂಸ್ಟರ್‌ ಡೋಸ್‌ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. 2ನೇ ಹಂತದ ಚುಚ್ಚುಮದ್ದಿನ ಬಗ್ಗೆ ನಿರ್ಲಕ್ಷ್ಯ ಸಲ್ಲ ಎಂದು ಹೇಳಿದರು.

10 ದಿನಗಳ ಹಿಂದೆಯೇ ಅಭಯಾರಣ್ಯದ ವನ್ಯಜೀವಿ ಇಲಾಖೆಯವರಿಗೆ ಹತ್ತಿಗೋಡು ಗ್ರಾಮದಲ್ಲಿ ಮಂಗ ಸತ್ತ ಬಗ್ಗೆ ವರದಿ ಬಂದ ಕಾರಣ ಕಾರ್ಯಾಚರಣೆ ನಡೆಸಿದ್ದರು. ಸತ್ತ ಮಂಗವನ್ನು ಸುಟ್ಟು ಅಗತ್ಯ ಪ್ರತಿಬಂಧಕ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ. ಆದರೂ ಸೋಂಕು ಪತ್ತೆಯಾದ ಕಾರಣ ಅಭಯಾರಣ್ಯ ವ್ಯಾಪ್ತಿಯಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸಲು ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಗ್ರಾಪಂ ಸದಸ್ಯ ರಾಜೇಶ ಯಲಕೋಡು ಮಾತನಾಡಿ, ಕೆಎಫ್‌ಡಿ ತಡೆಗೆ ಆರೋಗ್ಯ ಇಲಾಖೆ ಎಲ್ಲ ಮುಂಜಾಗ್ರತಾ ಕ್ರಮ ವಹಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಅಗತ್ಯ ಕ್ರಮ ಕೈಗೊಂಡಿಲ್ಲ. ಜಾನುವಾರು ಕಾಡಿನಿಂದ ಮರಳಿ ಬರುವಾಗ ಮೈಮೇಲೆ ಉಣ್ಣೆಯನ್ನು ಮನೆಯ ಕೊಟ್ಟಿಗೆ, ವಠಾರಗಳಿಗೆ ಹೊತ್ತು ತರುವ ಸಾಧ್ಯತೆಯಿದೆ. ಪಶು ವೈದ್ಯಕೀಯ ಆಸ್ಪತ್ರೆಯ ಸಿಬ್ಬಂದಿ ಅಸಹಕಾರದಿಂದ ಸೋಂಕು ಹರಡುವ ಸಾಧ್ಯತೆಯಿದೆ. ಜಾನುವಾರಿಗೆ ಅಗತ್ಯ ಲೇಪನ ದ್ರಾವಣ ನೀಡಿಲ್ಲ. ವೈರಾಣುಗಳನ್ನು ನಾಶಪಡಿಸಲು ಅಗತ್ಯ ಸುರಕ್ಷತಾ ವಿಧಾನಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಕೆಎಫ್‌ಡಿ ಸಂಕಷ್ಟ ಎದುರಾಗಿದ್ದ ಸಂದರ್ಭದಲ್ಲಿ ಎರಡು ಆ್ಯಂಬುಲೆನ್ಸ್‌, ಒಬ್ಬರು ಸಿಬ್ಬಂದಿ ಓಡಾಡುವ ವಾಹನ ಇತ್ತು. ಆದರೆ ನಂತರದ ದಿನಗಳಲ್ಲಿ ಎಲ್ಲವನ್ನೂ ಆರೋಗ್ಯ ಇಲಾಖೆ ಹಿಂಪಡೆದಿದೆ. ಆರಂಭ ಹಂತದಲ್ಲಿ ಘೋಷಣೆ ಮಾಡಿದ್ದ ಅನೇಕ ಸೌಲಭ್ಯಗಳು ಈಗ ಇಲ್ಲ. ಆರೋಗ್ಯ ಕಾರ್ಯಕರ್ತರಿಗೆ ದೊರೆತ ಸನ್ಮಾನ ಬಿಟ್ಟರೆ ಉಳಿದ ಯಾವುದೇ ಆಶ್ವಾಸನೆಗಳು ಇಲ್ಲಿ ನೆರವೇರಿಲ್ಲ ಎಂದು ಅವರು ಆರೋಪಿಸಿದರು.

Advertisement

ಅರಳಗೋಡು ಗ್ರಾಪಂ ವ್ಯಾಪ್ತಿ ಅತ್ಯಂತ ಕುಗ್ರಾಮಗಳ ಜೊತೆಯಲ್ಲಿ ಬಹುದೊಡ್ಡ ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಯನ್ನು ಹೊಂದಿದೆ. ಕಾಡಿನ ದುರ್ಗಮ ಹಾದಿಯಲ್ಲಿ ಅಲ್ಲೊಂದು ಇಲ್ಲೊಂದು ಇರುವ ಅಭಯಾರಣ್ಯ ವಾಸಿಗಳ ಮನೆ- ಮನೆಗೆ ಹೋಗಿ ಜಾಗೃತಿ ಮೂಡಿಸುವುದು ಆರೋಗ್ಯ ಇಲಾಖೆಗೆ ಸವಾಲಿನ ಕೆಲಸ. ತ್ವರಿತ ಕಾರ್ಯ ಚಟುವಟಿಕೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಒಂದೂ ವಾಹನವು ಇಲ್ಲದೇ ನಡೆದೇ ಹೋಗುವ ಸ್ಥಿತಿ ಇದೆ. ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಗ್ರಾಪಂ ಅಧ್ಯಕ್ಷ ಬಿ.ಆರ್. ಮೇಘರಾಜ್‌ ಹೇಳಿದರು.

ಸಂತ್ರಸ್ತ ರಾಮಸ್ವಾಮಿ ತೊರಮೆ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸಾ ವೆಚ್ಚ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಎಂ. ಕಮ್ಮಾರ್‌ ತಿಳಿಸಿದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗುಲಾಬ್‌ ಶಾ, ಸದಸ್ಯರಾದ ಸೋಮಾವತಿ, ಲಕ್ಷ್ಮೀ ದಿನೇಶ್‌, ಅರಣ್ಯಾಧಿಕಾರಿಗಳು, ಎನ್‌ಆರ್‌ಇಜಿ ಅಧಿಕಾರಿ ಬಾಲಸುಬ್ರಮಣ್ಯ, ಕೃಷಿ ಅಧಿಕಾರಿ ಹೂವಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next