Advertisement

ಕೆಯ್ಯೂರು: ಶೌಚಾಲಯ ನಿರ್ಮಾಣಕ್ಕೆ ಅನುದಾನ ಹಸ್ತಾಂತರ

01:44 PM Dec 23, 2018 | |

ಕೆಯ್ಯೂರು: ಕೆಯ್ಯೂರು ಗ್ರಾಮದ ಪರಿಶಿಷ್ಟ ಜಾತಿ ಕುಟುಂಬವೊಂದರ ಸಂಕಷ್ಟದ ಜೀವನದ ಬಗ್ಗೆ ಡಿ. 19ರಂದು ಉದಯವಾಣಿ ಸುದಿನದಲ್ಲಿ ಪ್ರಕಟಗೊಂಡ ‘ಹೆತ್ತವರಿಲ್ಲದ ನಾಲ್ವರು ಹೆಣ್ಣು ಮಕ್ಕಳಿಗೆ ಸೂರೂ ಇಲ್ಲ’ ವರದಿ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಮತ್ತಷ್ಟು ನೆರವು ದೊರೆತಿದೆ. ಬಿಜೆಪಿಯ ದ.ಕ.ಲೋಕಸಭಾ ಕ್ಷೇತ್ರದ ಸಂಚಾಲಕ ಗೋಪಾಲಕೃಷ್ಣ ಹೇರಳೆ, ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ ಅವರ ನೇತೃತ್ವದ ತಂಡ ಶನಿವಾರ ಮನೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ನೆರವು ನೀಡಿತ್ತು.

Advertisement

ತಾ.ಪಂ.ನಿಂದ 25 ಸಾವಿರ ರೂ.
ತಾ.ಪಂ.ಅನುದಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಬಿಡುಗಡೆಗೊಂಡ ರೂ.25 ಸಾವಿರ ಅನುದಾನವನ್ನು ತಾ.ಪಂ.ಅಧ್ಯಕ್ಷೆ ಭವಾನಿ ಚಿದಾನಂದ ಅವರು ನಾಲ್ವರು ಹೆಣ್ಣುಮಕ್ಕಳ ಅಜ್ಜಿ ಭಾಗೀರಥಿ ಅವರಿಗೆ ಹಸ್ತಾಂತರಿಸಿದರು. ಕೇಂದ್ರ ಸರಕಾರವು ಪ್ರತಿ ಮನೆಯಲ್ಲಿ ಶೌಚಾಲಯ ಇರಬೇಕು ಎಂದು ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ತುರ್ತಾಗಿ ಸ್ಪಂದನೆ ನೀಡಲಾಗಿದೆ ಎಂದ ಅವರು, ಸೋಮವಾರದಿಂದಲೇ ಕಾಮಗಾರಿ ಆರಂಭಿಸುವುದಾಗಿ ಭವಾನಿ ಚಿದಾನಂದ ಅವರು ಈ ಸಂದರ್ಭ ಪತ್ರಿಕೆಗೆ ತಿಳಿಸಿದರು.

ಗ್ರಾ.ಪಂ. ಮತ್ತು ವೈಯಕ್ತಿಕವಾಗಿ ತಲಾ 5 ಸಾವಿರ ರೂ. ವಿತರಣೆ
ಕೆಯ್ಯೂರು ಗ್ರಾ.ಪಂ.ಎಸ್‌ಸಿ/ಎಸ್‌ಟಿ 25 ನಿಧಿ ಮೂಲಕ 5 ಸಾವಿರ ರೂ. ಅನ್ನು ಗ್ರಾ.ಪಂ.ಸದಸ್ಯ ಕಿಟ್ಟು ಅಜಿಲ ಕಣಿಯಾರು ಹಸ್ತಾಂತರಿಸಿದರು. ಸಿವಿಲ್‌ ಗುತ್ತಿಗೆದಾರ ಯೋಗೀಶ್‌ ಪೂಜಾರಿ ಅವರು ವೈಯಕ್ತಿಕ ರೂಪದಲ್ಲಿ 5 ಸಾವಿರ ರೂ. ಸಹಾಯಧನ ನೀಡಿದರು. ಶೌಚಾಲಯ, ಸ್ನಾನಗೃಹಕ್ಕೆ ಹಣ ಸಾಲದಿದ್ದರೆ ಅದಕ್ಕೆ ಬೇಕಾದ ಉಳಿದ ವೆಚ್ಚವನ್ನು ತಾನು ಭರಿಸುವುದಾಗಿ ಗೋಪಾಲಕೃಷ್ಣ ಹೇರಳೆ ಅವರು ಭರವಸೆ ನೀಡಿದರು.

ದಲಿತ್‌ ಸೇವಾ ಸಮಿತಿ ನೆರವು
ಕುಟುಂಬಕ್ಕೆ ದಲಿತ್‌ ಸೇವಾ ಸಮಿತಿ ತಾ| ಅಧ್ಯಕ್ಷ ರಾಜು ಹೊಸ್ಮಠ ಭೇಟಿ ನೀಡಿ, ಸೇವಾ ಸಮಿತಿಯ ನಿಧಿಯಿಂದ ಮನೆಯ ಮೇಲ್ಚಾವಣಿಯ ಕೆಲಸ ಮಾಡಿಸುವ ಭರವಸೆ ನೀಡಿದ್ದಾರೆ.

ಈ ಸಂದರ್ಭ ರುಕ್ಮಯ ಗೌಡ, ಬೆಳ್ಳಾರೆ ಡಾ| ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿದ್ಯಾರ್ಥಿಗಳಾದ ಗಣೇಶ್‌, ರಮೇಶ್‌, ಸಂತೋಷ್‌ ಕುಮಾರ್‌, ಪ್ರವೀಣ್‌ ಕುಮಾರ್‌, ಶ್ರೇಯಸ್‌, ಸುಜಿತ್‌, ಸತೀಶ್‌, ಕೀರ್ತನ್‌, ಬಾಲಚಂದ್ರ ಮೊದಲಾದವರು ಉಪಸ್ಥಿತರಿದ್ದರು.ಕಳೆದ ಬುಧವಾರ ಹೆಸರು ತಿಳಿಸಲು ಇಚ್ಛಿಸದ ದಾನಿಯೊಬ್ಬರು ಈ ಕುಟುಂಬಕ್ಕೆ 10 ಸಾವಿರ ರೂ. ಧನಸಹಾಯ ನೀಡಿದ್ದರು. ಬೆಂಗಳೂರಿನ ವಿದ್ಯಾಮಾತಾ ಫೌಂಡೇಶನ್‌ ವತಿಯಿಂದ ಪದವಿ ವ್ಯಾಸಾಂಗ ಮಾಡುತ್ತಿರುವ ನೇತ್ರಾ ಅವರ ಮುಂದಿನ ಒಂದು ವರ್ಷದ ವಿದ್ಯಾಭ್ಯಾಸದ ವೆಚ್ಚ ಭರಿಸಲು ಸಂಸ್ಥೆಯ ಅಧ್ಯಕ್ಷ ಭಾಗೇಶ್‌ ರೈ ಮುಂದಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next