ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಮೂರು ದಿನಗಳ ಹಿಂದೆ ಹಲ್ಲೆಗೊಳಗಾದ ಕೈದಿಯ ಕುಟುಂಬಸ್ಥರು ಜೈಲಿನ ಕರಾಳ ಮುಖದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂಡಲಗಾ ಜೈಲಿನಲ್ಲಿ ಸಹ ಕೈದಿಯಿಂದ ಹಲ್ಲೆಗೊಳಗಾದ ಮಂಡ್ಯ ಮೂಲದ ಸಾಯಿ ಸುರೇಶ ಕುಮಾರ ಎಂಬ ಕೈದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಯಿ ಸೂರ್ಯಕುಮಾರ ಉರ್ಫ್ ಸುರೇಶ ನಾಗಲಿಂಗಯ್ಯನನ್ನು ನೋಡಲು ಬಂದಿರುವ ಸಹೋದರಿ ಶಶಿಕಲಾ ಹಾಗೂ ತಾಯಿ ಪುಟ್ಟ ತಾಯಮ್ಮ ಸುದ್ದಿಗಾರರ ಎದುರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಶಶಿಕಲಾ, ಮಗ ಆಸ್ಪತ್ರೆಯಲ್ಲಿ ದಾಖಲಾಗಿದ್ದರಿಂದ ಮಂಡ್ಯದಿಂದ ಭೇಟಿ ಆಗಲು ಬಂದಿದ್ದೇವೆ. ನನ್ನ ಸಹೋದರನನ್ನು ಕೊಲ್ಲಲು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಸುರಕ್ಷಿತವಾಗಿ ಇರಬೇಕಾದ ಜೈಲಿನಲ್ಲಿ ಸ್ಕ್ರೂಡೈವರ್ ಹಾಗೂ ಖಾರದ ಪುಡಿ ಬಂದಿದ್ದಾದರೂ ಹೇಗೆ? ಖಾರದ ಪುಡಿ ಎರಚಿ ನನ್ನ ಸಹೋದರನನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು. ಜೈಲಿನಲ್ಲಿ ಟಾರ್ಚರ್ ಇದೆ. ಹಣ ನೀಡದಿದ್ದರೆ ಜೈಲಿನಲ್ಲಿ ಹಲ್ಲೆ ಮಾಡುತ್ತಿದ್ದಾರೆ ಎಂದು ಸಹೋದರ ಸಾಯಿ ಸುರೇಶಕುಮಾರ ನನ್ನ ಬಳಿ ಅಲವತ್ತುಕೊಂಡಿದ್ದ ಎಂದರು.
ಜೈಲಿನ ಒಳಗೆ 10 ಸಾವಿರ ರೂ. ಕೊಟ್ಟರೆ ಬೇಸಿಕ್ ಸೆಟ್ ಮೊಬೈಲ್, 20 ಸಾವಿರ ರೂ. ಕೊಟ್ಟರೆ ಆ್ಯಂಡ್ರಾಯ್ಡ ಮೊಬೈಲ್ ಸಿಗುತ್ತದೆ. ಹಣ ಕೊಟ್ಟರೆ ಐಷಾರಾಮಿ ಕೊಠಡಿ, ಟಿವಿ ಸಿಗುತ್ತದೆ. ಹಣ ನೀಡಿದ ಕೈದಿಯನ್ನು ಒಂದು ತರಹ ನೋಡುವುದು, ಹಣ ನೀಡದಿದ್ದರೆ ಸೆಲ್‌ನಲ್ಲಿ ಇಟ್ಟು ಹಿಂಸೆ ಕೊಡಲಾಗುತ್ತಿದೆ. ಇಂಥ ಅವ್ಯವಹಾರಗಳು ಜೈಲಿನಲ್ಲಿ ನಡೆಯುತ್ತಿವೆ. ಜೈಲರ್‌ಗಳಿಗೆ ನಾನು ನೇರವಾಗಿಯೇ ಹಣ ಕಳುಹಿಸಿದ್ದೇನೆ. ಐದಾರು ಸಲ ಹಣ ಜೈಲರ್‌ಗಳ ಅಕೌಂಟ್‌ಗೆ ಕಳುಹಿಸಿದ್ದೇನೆ. ನನ್ನ ಸಹೋದರನಿಗೆ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಬೇರೆ ಆಸ್ಪತ್ರೆಗೆ ಕಳುಹಿಸಿ ಎಂದರೂ ಬಿಡುತ್ತಿಲ್ಲ. ನಾವು ಹಣ ಖರ್ಚು ಮಾಡುತ್ತೇವೆ ಎಂದರೂ ಬೇರೆ ಕಡೆಗೆ ಚಿಕಿತ್ಸೆ ನೀಡಲು ಅವಕಾಶ ಮಾಡುತ್ತಿಲ್ಲ ಎಂದರು.