Advertisement

ಕಂಬಳ, ಕೃಷಿ ಕಾಯಕದಲ್ಲೇ ಖುಷಿ ಕಂಡ ಕೇಶವ ಕೈಪ

10:22 AM Dec 23, 2019 | mahesh |

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ “ಉದಯವಾಣಿ’ಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಹೆಸರು: ಕೇಶವ ಕೈಪ
ಏನೇನು ಕೃಷಿ?: ಭತ್ತ, ತೆಂಗು, ಅಡಿಕೆ, ಅಡಿಕೆ, ರಬ್ಬರ್‌, ಕರಿಮೆಣಸು, ವೀಳ್ಯದೆಲೆ
ಎಷ್ಟು ವಯಸ್ಸು: 62
ಕೃಷಿ ಪ್ರದೇಶ: 10 ಎಕ್ರೆ

ಉಪ್ಪಿನಂಗಡಿ: ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮ ಬೆಳ್ಳಿಪ್ಪಾಡಿ ನಿವಾಸಿಯಾಗಿರುವ ದಿ| ಮಾಂಕು ಭಂಡಾರಿ ಅವರ ಪುತ್ರ ಕೇಶವ ಕೈಪ ಅವರು ಕೃಷಿ ಕಾಯಕದಲ್ಲಿ ಖುಷಿ ಕಂಡ ವ್ಯಕ್ತಿ. ಕೃಷಿ ಕ್ಷೇತ್ರದಲ್ಲಿನ ಸಂಶೋಧನೆ ಹಾಗೂ ಸಾಧನೆಗಾಗಿ ಕೃಷಿ ಇಲಾಖೆ ಇವರನ್ನು ಮೂರು ಸಾರಿ ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ.

ಇವರು 10 ಎಕ್ರೆಗೂ ಹೆಚ್ಚು ಜಾಗದಲ್ಲಿ ಭತ್ತದ ಗದ್ದೆ, ತೆಂಗು, ಅಡಿಕೆ, ರಬ್ಬರ್‌, ಕರಿಮೆಣಸು, ತರಕಾರಿ ಬೆಳೆಯೊಂದಿಗೆ 500ಕ್ಕೂ ಮಿಕ್ಕ ಸಾಗುವಾನಿ ಗಿಡ, ಶ್ರೀಗಂಧ, ರಕ್ತಚಂದನ, ಅಗರ್‌ ವುಡ್‌, ಬೀಟೆ ಗಿಡಗಳನ್ನು ನೆಡುವ ಮೂಲಕ ಕೃಷಿಯನ್ನು ಬಹು ವಿಧ ಸಂಪಾದನೆಯನ್ನಾಗಿ ಪರಿವರ್ತಿಸಿದ್ದಾರೆ.

2010-11ರಲ್ಲಿ ಭತ್ತದ ಕೃಷಿಗೆ 2017-18ರಲ್ಲಿ ಪಾರಂಪರಿಕ ಶೈಲಿಯ ಗದ್ದೆ ಉಳುಮೆ, 2018-19ರಲ್ಲಿ ಸಾವಯವ ಕೃಷಿಯಲ್ಲಿ ಪ್ರಶಸ್ತಿಗಳು ಲಭಿಸಿದರೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೀಗೆ ಇವರ ಕೃಷಿ ಭೂಮಿ ಅಧ್ಯಯನ ಸ್ಥಳವಾಗಿದೆ.

Advertisement

ಅಡಿಕೆಯೊಂದಿಗೆ ಹಲವು ಬೆಳೆ
ಅಡಿಕೆ ಕೃಷಿಯಲ್ಲೂ ಹಲವು ತಳಿಯ ಅಡಿಕೆಗಳನ್ನು ಬೆಳೆಸುತ್ತಿರುವ ಇವರು, ತೆಂಗು, ಕೊಕ್ಕೊ, ಕರಿಮೆಣಸು, ವೀಳ್ಯದೆಲೆ, ಚಿಕ್ಕು, ತರಕಾರಿ, ಮೊದಲಾದ ಉಪ ಬೆಳೆಗಳನ್ನು ವ್ಯವಸ್ಥಿತವಾಗಿ ಬೆಳೆಸುತ್ತಿದ್ದಾರೆ.

ತೋಟದಲ್ಲಿನ ಗುಡ್ಡ ಪ್ರದೇಶವನ್ನು ಬೆಲೆ ಬಾಳುವ ಗಿಡಮರಗಳನ್ನು ಬೆಳೆಸಲು ಬಳಸುತ್ತಿರುವ ಇವರು, 275 ಶ್ರೀಗಂಧದ ಗಿಡಗಳನ್ನು ನೆಟ್ಟಿದ್ದು, ಹೆಚ್ಚಿನವು ಬೆಳೆದು ನಿಂತಿವೆ. ಅಂತೆಯೇ ಬೀಟಿ ಹಾಗೂ ಹೆಬ್ಬಲಸು ಗಿಡಗಳನ್ನು ಅಯಕಟ್ಟಿನ ಜಾಗದಲ್ಲಿ ನೆಟ್ಟು ಬೆಳೆಸುತ್ತಿರುವ ಕೇಶವ, ರಕ್ತಚಂದನದ ಗಿಡಗಳನ್ನೂ ನೆಟ್ಟು ಮಾರುಕಟ್ಟೆಯಲ್ಲಿನ ಬಹು ಬೇಡಿಕೆಗೆ ಸ್ಪಂದಿಸುವ ಮೂಲಕ ಸಕಾಲಿಕ ಲಾಭ ಗಳಿಸಲು ಮುಂದಾಗಿದ್ದಾರೆ.

ಸುಗಂಧ ದ್ರವ್ಯಕ್ಕೆ ಬೇಕಾದ ಅಗರ್‌ ವುಡ್‌ ಬೆಳೆಸುವ ಯತ್ನ
ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿರುವ ಸುಗಂಧ ದ್ರವ್ಯದ ಮೂಲ ವಸ್ತುವಾ¨, ಶ್ರೀಗಂಧಕ್ಕಿಂತಲೂ ಹೆಚ್ಚು ಬೇಡಿಕೆ ಹೊಂದಿರುವ ಅಗರ್‌ ವುಡ್‌ ಎಂಬ ಜಾತಿಯ ಗಿಡಗಳನ್ನು ನೆಡಲು ಮುಂದಾಗಿದ್ದು, ಇದು 9 ವರ್ಷಗಳ ಬಳಿಕ ಬೆಳೆದು ನಿಲ್ಲಲಿವೆ. ಆ ವೇಳೆ ಮರದ ತಿರುಳನ್ನು ಸಂಬಂಧಿತ ಸಂಸ್ಥೆಗೆ ಮಾರಾಟ ಮಾಡಲಾಗುವುದು. ಪ್ರಸಕ್ತ ಮಾರುಕಟ್ಟೆಯಲ್ಲಿ ಅಗರ್‌ ವುಡ್‌ ಮರದ ಒಂದು ಕೆಜಿ ತಿರುಳಿಗೆ 24 ಸಾವಿರ ರೂ. ಬೆಲೆ ಇದ್ದು, ಇದು ಕೃಷಿಕರಿಗೆ ಹೆಚ್ಚಿನ ಲಾಭವನ್ನು ಒದಗಿಸಲಿರುವುದರಿಂದ ಅಗರ್‌ ವುಡ್‌ ಮರವನ್ನು ಬೆಳೆಸುವ ಕಾರ್ಯಕ್ಕೆ ಇವರು ಮುಂದಾಗಿದ್ದಾರೆ.
ನರ್ಸರಿಯ ನಂಟು

ತಾನು ಮಾತ್ರ ಕೃಷಿಯಲ್ಲಿ ಸಾಧಕನಾದರೆ ಸಾಲದು, ಉಳಿದವರೂ ಸಾಧಕರಾಗಬೇಕೆಂದು ಹಂಬಲಿಸಿ ತನ್ನ ತೋಟದಲ್ಲಿಯೇ ವಿವಿಧ ಬಗೆಯ, ಸ್ವದೇಶಿ ಹಾಗೂ ವಿದೇಶಿ ಮೂಲದ ಗಿಡಗಳನ್ನು ಮಾರಾಟ ಮಾಡುವ ಸಲುವಾಗಿ ಮೆಗಾ ನರ್ಸರಿ ನಡೆಸುತ್ತಿದ್ದು, ಕೃಷಿಯಲ್ಲಿ ದಣಿವರಿಯದ ದುಡಿಮೆಯಲ್ಲಿ ತೊಡಗಿದ್ದಾರೆ. ಮತ್ತಷ್ಟು ಅವಕಾಶಗಳತ್ತ ಚಿತ್ತವಿರಿಸಿದ್ದಾರೆ.

ಕಂಬಳ ಕರೆಯಲ್ಲೂ ನಾಯಕತ್ವ
ಕಂಬಳ ಉಳಿಯುವಿಕೆಗಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ ಮುಂಚೂಣಿ ನಾಯಕರಾಗಿ, ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳದ ಉಪಾಧ್ಯಕ್ಷರಾಗಿ, ಕಂಬಳ ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಕೇಶವ ಅವರು, ಅದಕ್ಕಾಗಿ ಮೂರು ಮುದ್ದಿನ ಕೋಣಗಳನ್ನು ಸಾಕಿ ಸಲಹುತ್ತಿದ್ದಾರೆ. ದಿನಕ್ಕೆ 13 ಕೆಜಿ ಹುರುಳಿಯನ್ನು ಬೇಯಿಸಿ, ಯಂತ್ರದ ಮೂಲಕ ಹುಡಿ ಮಾಡಿ ಕೋಣಗಳಿಗೆ ತಿನಿಸುವ ಅವರು, ಕೋಣಗಳಿಗೆ ವ್ಯಾಯಾಮ ಒದಗಿಸುವ ಸಲುವಾಗಿ ಗದ್ದೆ ಉಳುಮೆ, ಈಜು ಕೊಳದಲ್ಲಿ ಕೋಣಗಳ ಈಜಾಟ ಅವುಗಳಿಗೆ ದಿನನಿತ್ಯ ಲಭ್ಯ. ಆ ಬಳಿಕ ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಸಿ ಕೋಣಗಳ ಹಟ್ಟಿಯಲ್ಲಿ ವಿಶ್ರಾಂತಿಗೆ ಬಿಡುವ ಇವರು, ಕೋಣಗಳ ಬಗ್ಗೆ ತೋರುವ ಪ್ರೀತಿ ವಾತ್ಸಲ್ಯ ಅನುಪಮವೆನಿಸಿದೆ. ಕೇಶವ ಅವರು ಪತ್ನಿ, ಈರ್ವರು ಪುತ್ರರು ಹಾಗೂ ಓರ್ವ ಪುತ್ರಿಯೊಂದಿಗೆ ಕೃಷಿ ಜೀವನ ನಡೆಸುತ್ತಿದ್ದಾರೆ. ಓರ್ವ ಪುತ್ರ ಎಂಜಿನಿಯರ್‌ ಆಗಿದ್ದು, ಇನ್ನೋರ್ವ ಪುತ್ರ ಇವರೊಂದಿಗೆ ಕೃಷಿಯನ್ನು ಮುಂದುವರಿಸಿದ್ದಾರೆ.

ವೀಳ್ಯದೆಲೆಗೆ ಹೆಚ್ಚು ಬೇಡಿಕೆ ಹೆಚ್ಚು
ನಾನು ಬೆಳೆಸುವ ಬೆಳೆಗಳ ಪೈಕಿ ಪ್ರಸಕ್ತ ವೀಲ್ಯೇದೆಲೆ ಕೃಷಿ ಹೆಚ್ಚಿನ ಲಾಭದಾಯಕವಾಗಿದೆ. ಮಾರುಕಟ್ಟೆಯಲ್ಲಿ ವೀಳ್ಯದೆಲೆಗಳ ಲಭ್ಯತೆ ತೀರಾ ಕಡಿಮೆಯಾಗಿದೆ. ಕನಿಷ್ಠ ಅವಧಿಯಲ್ಲಿ ಗರಿಷ್ಠ ಲಾಭವನ್ನು ವೀಳ್ಯದೆಲೆಯ ಕೃಷಿ ತಂದು ಕೊಡುತ್ತಿದೆ. ಪ್ರಸಕ್ತ ಒಂದು ವೀಳ್ಯದೆಲೆಗೆ 50 ಪೈಸೆ ದರ ಲಭಿಸುತ್ತಿದೆ. ಸ್ವಾವಲಂಬೀ ಸುಖೀ ಜೀವನಕ್ಕೆ ಕೃಷಿಯಂತ್ರಹ ಕ್ಷೇತ್ರ ಮತ್ತೂಂದಿಲ್ಲ.
-ಕೇಶವ ಕೈಪ,ಬೆಳ್ಳಿಪ್ಪಾಡಿ ಪ್ರಗತಿಪರ ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next