Advertisement
ಕದ್ರಿ ಪರಿಸರದಲ್ಲಿ 1960ರಲ್ಲಿ ಜನಿಸಿದವರು ಕೇಶವ ಶಕ್ತಿನಗರ. 5ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದರು. ಬಡತನದ ಕಾರಣದಿಂದ ಶಾಲಾ ವಿದ್ಯಾಭ್ಯಾಸಕ್ಕೆ ಪೂರ್ಣವಿರಾಮ ಬಿದ್ದರೂ ತನ್ನ 15ನೇ ವಯಸ್ಸಿನಲ್ಲಿ ಕಾವೂರು ಕೇಶವರಿಂದ ನಾಟ್ಯಾಭ್ಯಾಸ ಮಾಡಿದರು. ಅವಿರತ ಶ್ರಮ ಮತ್ತು ಆಸಕ್ತಿಯ ಕಾರಣದಿಂದ ಮುಂದೆ ರಂಗದ ಸರ್ವಾಂಗವನ್ನೂ ಮೈಗೂಡಿಸಿಕೊಂಡು ಪಾತ್ರಕ್ಕೆ ಜೀವ ತುಂಬುವ ಕಲಾವಿದನಾಗಿ ಬೆಳೆದರು. ಕಾವೂರು ಕೇಶವರ ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ಆರಂಭಿಸಿದ ಕೇಶವರು ನಿತ್ಯವೇಷ, ಸ್ತ್ರೀವೇಷ, ದೇವೇಂದ್ರ ಬಲ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಾ ಬೆಳೆದರು. ಮುಂದೆ ಕೊಲ್ಲೂರು ಮೇಳದಲ್ಲಿ ಎರಡು ವರ್ಷ, ತಲಕಳ ಮೇಳದಲ್ಲಿ 18 ವರ್ಷ ಹಾಗೂ ಇರುವೈಲು ಮೇಳ, ಕೂಡ್ಲು ಮೇಳ, ಅರುವ ಮೇಳ, ಅಡ್ಯಾರು ಮೇಳಗಳಲ್ಲಿಯೂ ತಿರುಗಾಟವನ್ನು ಮಾಡಿದ್ದಾರೆ. ಮಳೆಗಾಲದಲ್ಲಿ ಶಿವಾಜಿ ರಾವ್ ಚೌಹಾಣ್ ಅವರ ಜತೆಗೆ ಮುಂಬಯಿ, ಸಾಂಗ್ಲಿ, ಹುಬ್ಬಳ್ಳಿ, ಧಾರವಾಡ, ಬೆಳಗಾಂ, ಮಂತ್ರಾಲಯ ಮುಂತಾದ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೂ ತನ್ನ ತಿರುಗಾಟವನ್ನು ವಿಸ್ತರಿಸಿಕೊಂಡಿದ್ದಾರೆ. ಯೌವನದಲ್ಲಿ ಪುಂಡು ವೇಷಗಳಲ್ಲಿ ಜನಪ್ರಿಯತೆಯನ್ನು ಗಳಿಸಿದ ಕೇಶವರು ಚಂಡ- ಮುಂಡ, ಉಂಡ-ಪುಂಡ, ಚಂಡ- ಪ್ರಚಂಡ ಮೊದಲಾದ ವೇಷಗಳನ್ನು ನಿರ್ವಹಿಸುತ್ತಿದ್ದರು. ಮುಂದೆ ರಾಜವೇಷಗಳಲ್ಲಿ ಗುರುತಿಸಿಕೊಂಡ ಕೇಶವರು ಪೌರಾಣಿಕ ಪ್ರಸಂಗಗಳಲ್ಲಿನ ರಕ್ತಬೀಜ, ದೇವೇಂದ್ರ, ಅರ್ಜುನ ಮೊದಲಾದ ಕೋಲು ಕಿರೀಟ ವೇಷಗಳನ್ನು ನಿರ್ವಹಿಸಿದ ಅನುಭವಿ.
Related Articles
Advertisement
ಅನೇಕ ಸಂಸ್ಥೆಗಳ ಸಮ್ಮಾನಗಳು ಇವರಿಗೆ ಸಂದಿವೆ. ಇಂದಿಗೂ ಕೇಶವರ ಕೋಲು ಕಿರೀಟ, ಪಕಡಿ, ದೇವಿ ಕಿರೀಟ, ನಾಟಕೀಯ ಕಿರೀಟ, ಕೇಶವಾರಿ ತಟ್ಟಿ ಮತ್ತು ಪೇಟಗಳಿಗೆ ಅಪಾರ ಬೇಡಿಕೆಯಿದೆ. ಆದರೆ ಇವರಿಗೆ ಸಂದ ಮನ್ನಣೆ ಕಡಿಮೆ. ಕೇಶವರು ಎಂದೂ ಪ್ರಚಾರ ಬಯಸಿದವರಲ್ಲ. ಪತ್ನಿ ಶೀಲಾ, ಮೂವರು ಮಕ್ಕಳ ಜತೆಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಶರತ್‌ಕುಮಾರ್ ಕದ್ರಿ