Advertisement

Kesavananda Bharati case; ಸಂವಿಧಾನದ ಆಶಯ ಎತ್ತಿ ಹಿಡಿದ ತೀರ್ಪಿಗೆ ಸುವರ್ಣ ಸಂಭ್ರಮ

09:35 PM Apr 24, 2023 | Team Udayavani |

ದೇಶದ ಸಂವಿಧಾನ ಮತ್ತು ಕಾನೂನಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಏಪ್ರಿಲ್‌ 24. “ಸಂವಿಧಾನದ ಮೂಲ ಸ್ವರೂಪವನ್ನು ಬದಲು ಮಾಡಲು ಸಾಧ್ಯವೇ ಇಲ್ಲ’ ಎಂಬ ಐತಿಹಾಸಿತ ತೀರ್ಪು ಪ್ರಕಟಗೊಂಡು ಸೋಮವಾರಕ್ಕೆ ಸರಿಯಾದಿ 50 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಸೋಮವಾರ “ಕೇಶವಾನಂದ ಭಾರತಿ ವರ್ಸಸ್‌ ಕೇರಳ ಸರ್ಕಾರ’ ಪ್ರಕರಣದ ತೀರ್ಪಿನ ಮಾಹಿತಿಯನ್ನು ಒಳಗೊಂಡ ವೆಬ್‌ ಪೇಜ್‌ //(https://judgments.ecourts.gov.in/KBJ/?p=home) ವೊಂದನ್ನು ರಚಿಸಿದೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಸೋಮವಾರ ಇದನ್ನು ಲೋಕಾರ್ಪಣೆಗೊಳಿಸಿದ್ದಾರೆ.

Advertisement

ಏನಿದು ಪ್ರಕರಣ?
1973ರಲ್ಲಿ ಕೇರಳ ಸರ್ಕಾರ ರೂಪಿಸಿದ್ದ ಭೂಸುಧಾರಣಾ ಕಾಯ್ದೆ ಅನ್ವಯ ಕಾಸರಗೋಡು ಜಿಲ್ಲೆಯ ಎಡನೀರು ಮಠ ಹೊಂದಿದ್ದ ಆಸ್ತಿಯನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿತ್ತು. ಅದರ ವಿರುದ್ಧ ಕೇಶವಾನಂದ ಭಾರತಿ ಸ್ವಾಮೀಜಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸಂವಿಧಾನವನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಎಷ್ಟು ಹಕ್ಕು ಇದೆ ಎಂದೂ ಪ್ರಶ್ನಿಸಿದ್ದರು. ಖ್ಯಾತ ನ್ಯಾಯವಾದಿಗಳಾದ ನಾನಿ ಎ ಪಾಲಖೀವಾಲಾ, ರಾಮ್‌ ಜೇಠ್ಮಲಾನಿ ಸ್ವಾಮೀಜಿ ಪರ ವಾದಿಸಿದರು. ಅದಕ್ಕೂ ಹಿಂದೆ, ಶಂಕರಿ ಪ್ರಸಾದ್‌ ಮತ್ತು ಸಜ್ಜನ್‌ ಸಿಂಗ್‌ ಪ್ರಕರಣಗಳಲ್ಲಿ “ಸಂವಿಧಾನ ತಿದ್ದುಪಡಿ ಮಾಡಲು ಸಂಸತ್‌ಗೆ ಪರಮಾಧಿಕಾರ ಇದೆ’ ಎಂಬ ತೀರ್ಪು ಹೊರಬಿದ್ದಿತ್ತು.

ದೀರ್ಘ‌ಕಾಲದ ವಿಚಾರಣೆ
ಸುಪ್ರೀಂ ಕೋರ್ಟ್‌ನ ಇತಿಹಾಸದಲ್ಲೇ ಮೊದಲ ಬಾರಿಗೆ 13 ಮಂದಿ ನ್ಯಾಯಮೂರ್ತಿಗಳಿದ್ದ ಸಾಂವಿಧಾನಿಕ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿತ್ತು. 1972ರ ಅ.31ರಿಂದ 1973 ಮಾ.23ರ ವರೆಗೆ ವಾದ ಮಂಡನೆ ನಡೆದಿತ್ತು. 1973ರ ಏ.24ರಂದು ಮಹತ್ವದ ತೀರ್ಪು ಪ್ರಕಟಗೊಂಡಿತ್ತು.

ನ್ಯಾಯಪೀಠ ಹೇಳಿದ್ದೇನು?
ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿಯೂ ಅದರ ಮೂಲಸ್ವರೂಪಕ್ಕೆ ಧಕ್ಕೆ ತರುವಂತಿಲ್ಲ. ಸಂವಿಧಾನದ ಮೂಲರಚನೆಯನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್‌ಗೆ ಇಲ್ಲ ಎಂಬುದು ನ್ಯಾಯಪೀಠದ ತೀರ್ಪಾಗಿತ್ತು. ಕಾನೂನು ಮತ್ತು ನಿಯಮಗಳನ್ನು ರಚಿಸುವಲ್ಲಿ ಸಂಸತ್‌ಗೆ ಪರಮಾಧಿಕಾರ ಇದೆಯಾದರೂ, ಸಂವಿಧಾನದ ಮೂಲ ರಚನೆಗೆ ತೊಡಕುಂಟುಮಾಡುವಂತಿಲ್ಲ. ಅದರಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ, ನ್ಯಾಯಾಂಗಕ್ಕೆ ನೀಡಲಾಗಿರುವ ಸ್ವಾತಂತ್ರ್ಯ, ಅಧಿಕಾರ ವಿಭಜನೆ, ಜಾತ್ಯತೀತತೆ ವಿಚಾರಗಳಿಗೆ ತಿದ್ದುಪಡಿ ತರುವಂತಿಲ್ಲ ಎಂಬ ಐತಿಹಾಸಿಕ ತೀರ್ಪು ಅಂದು ಹೊರಬಿದ್ದಿತ್ತು.

68 – ವಿಚಾರಣೆ ನಡೆದ ದಿನಗಳು
13- ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳು
7:6- ಅನುಪಾತದ ತೀರ್ಪು
1973 ಏ.24- ತೀರ್ಪು ಪ್ರಕಟವಾದ ದಿನ
ಬಹುಮತದ ತೀರ್ಪು ಕೊಟ್ಟವರು- ಮುಖ್ಯ ನ್ಯಾಯಮೂರ್ತಿ ಎಸ್‌.ಎಂ.ಸಿಕ್ರಿ, ನ್ಯಾ.ಜೆ.ಎಂ.ಶೆಲಾತ್‌, ನ್ಯಾ.ಕೆ.ಎಸ್‌.ಹೆಗ್ಡೆ (ನಿವೃತ್ತ ಲೋಕಾಯುಕ್ತ ನ್ಯಾ.ಎನ್‌.ಸಂತೋಷ್‌ ಹೆಗ್ಡೆ ಅವರ ತಂದೆ), ನ್ಯಾ.ಎ.ಎನ್‌.ಗ್ರೋವರ್‌, ನ್ಯಾ.ಪಿ.ಜೆ.ರೆಡ್ಡಿ, ನ್ಯಾ.ಎಚ್‌.ಆರ್‌.ಖನ್ನಾ, ನ್ಯಾ.ಎ.ಕೆ.ಮುಖರ್ಜಿ.

Advertisement

ಭಿನ್ನ ತೀರ್ಪು ಕೊಟ್ಟವರು
ನ್ಯಾ.ಎ.ಎನ್‌. ರಾಯ್‌, ನ್ಯಾ.ಡಿ.ಜಿ.ಪಾಲೇಕರ್‌, ನ್ಯಾ.ಕೆ.ಕೆ.ಮ್ಯಾಥ್ಯೂ, ನ್ಯಾ.ಎಂ.ಎಚ್‌.ಬೇಗ್‌, ನ್ಯಾ.ಎಸ್‌.ಎನ್‌.ದ್ವಿವೇದಿ, ನ್ಯಾ.ವೈ.ವಿ.ಚಂದ್ರಚೂಡ್‌ (ಹಾಲಿ ಸಿಜೆಐ ಡಿ.ವೈ.ಚಂದ್ರಚೂಡ್‌ ಅವರ ತಂದೆ)

ಸಿಜೆಐ ಡಿ.ವೈ.ಚಂದ್ರಚೂಡ್‌ ಹೇಳಿದ್ದೇನು?
ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಪ್ರಕಟವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ವೆಬ್‌ಪೇಜ್‌ ರೂಪಿಸಿದ್ದೇವೆ. ಈ ಪ್ರಕರಣದ ಹಿನ್ನೆಲೆ, ಬೆಳೆದು ಬಂದ ದಾರಿ, ವಾದ ಮಂಡನೆ, ತೀರ್ಪು ಸೇರಿದಂತೆ ಸಮಗ್ರ ವಿವರಗಳು ಇದರಲ್ಲಿವೆ. ಜಗತ್ತಿನಾದ್ಯಂತದ ಕಾನೂನು ಕ್ಷೇತ್ರದ ಸಂಶೋಧಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ.

Advertisement

Udayavani is now on Telegram. Click here to join our channel and stay updated with the latest news.

Next