ಅಜೆಕಾರು: ಕೆರ್ವಾಶೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಮಡಿವಾಳಕಟ್ಟೆ ಕೆರೆಯು ಸುಮಾರು 1.50 ಎಕ್ರೆಯಷ್ಟು ವಿಸ್ತೀರ್ಣ ಹೊಂದಿದ್ದು ಇದೀಗ ಹೂಳು ತುಂಬಿ ನೀರು ಇಲ್ಲದಂತಾಗಿದೆ.
ಕೆರೆ ಹೂಳಿನಿಂದ ತುಂಬಿದ್ದು ಹೂಳೆತ್ತಿ ಅಭಿವೃದ್ಧಿ ಪಡಿಸಿದರೆ ಸಮಗ್ರ ಕೆರ್ವಾಶೆ ಪಂಚಾ ಯತ್ ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ಜೊತೆಗೆ ಸುಮಾರು 50 ಕೃಷಿಕರ ಭತ್ತದ ಗದ್ದೆಗೆ ನೀರು ಒದಗಿಸಬಹುದಾಗಿದೆ.
ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಕೃಷಿ ಬಳಕೆಗಾಗಿ ಹೊಸಹೊಸ ಬಾವಿ, ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಬದಲಿಗೆ ನೀರಿನ ಆಶ್ರಯ ಇರುವ ಮಡಿವಾಳಕಟ್ಟೆ ಕೆರೆ ಅಭಿವೃದ್ಧಿಪಡಿಸಿದರೆ ಸಾಕಷ್ಟು ನೀರು ಲಭ್ಯವಾಗುವ ಜತೆಗೆ ಮಳೆಗಾಲದಲ್ಲಿ ಸುರಿದ ಮಳೆಯ ನೀರು ಶೇಖರಣೆಗೊಂಡು ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ.
1997ರಲ್ಲಿ ಒಮ್ಮೆ ಸ್ವಲ್ಪ ಪ್ರಮಾಣದಲ್ಲಿ ಕೆರೆಯ ಹೂಳೆತ್ತಲಾಗಿತ್ತು. ಆದರೆ ಕಳೆದ 20 ವರ್ಷಗಳಿಂದ ಕೆರೆಯ ಹೂಳೆತ್ತದೆ ಸೂಕ್ತ ನಿರ್ವಹಣೆ ಇಲ್ಲದೆ ಕೆರೆ ಹೂಳಿನಿಂದ ಮುಚ್ಚಿ ಹೋಗಿದೆ.
ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ಅಧಿ ಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಸೂಕ್ತ ಅನುದಾನ ಒದಗಿಸಿ ತುರ್ತಾಗಿ ಕೆರೆ ಅಭಿವೃದ್ಧಿಪಡಿಸಬೇಕಾಗಿದೆ.
-ಪ್ರಶಾಂತ್ ಡಿ’ಸೋಜಾ ಕೆರ್ವಾಶೆ