Advertisement

Kerosene; ನೀಡಿದ ಭರವಸೆಯಂತೆ ಪ್ರತಿ ದೋಣಿಗೆ 300 ಲೀಟರ್ : ಸಚಿವ ವೈದ್ಯ

08:58 PM Sep 04, 2023 | Team Udayavani |

ಭಟ್ಕಳ: ರಾಜ್ಯದಲ್ಲಿ ಮುಖ್ಯವಾಗಿ ಮೀನುಗಾರಿಕೆಯನ್ನು ನಂಬಿ ಇರುವ ಮೂರು ಜಿಲ್ಲೆಯ ಮೀನುಗಾರರಿಗೆ ಸೀಮೆ ಎಣ್ಣೆ ದೊರೆಯದೇ ತೀವ್ರವಾದ ತೊಂದರೆ ಇತ್ತು. ಚುನಾವಣೆಯ ಸಮಯದಲ್ಲಿ ಈಗಿನ ಮುಖ್ಯ ಮಂತ್ರಿ ಮತ್ತು ಉಪ ಮುಖ್ಯ ಮಂತ್ರಿಗಳು ಸೀಮೆ ಎಣ್ಣೆ ನೀಡುವ ಕುರಿತು ನಿಮಗೆ ನೀಡಿದ ಭರವಸೆಯಂತೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೈಗಾರಿಕಾ ಸೀಮೆ ಎಣ್ಣೆಯನ್ನು ಪ್ರತಿ ದೋಣಿಗೆ 300 ಲೀಟರಿನಂತೆ ಪೂರೈಸಲು ಕ್ರಮ ಕೈಗೊಂಡಿದ್ದೇನೆ ಎಂದು ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

Advertisement

ತಾಲೂಕಿನ ತೆಂಗಿನಗುಂಡಿ ಮೀನುಗಾರಿಕಾ ಬಂದರಿನಲ್ಲಿ ಸೋಮವಾರ ಸಾಂಪ್ರದಾಯಿಕ ಯಾಂತ್ರೀಕೃತ ನಾಡಡೋಣಿ ಮೀನುಗಾರರಿಗೆ ರಿಯಾಯತಿ ದರದಲ್ಲಿ ಕೈಗಾರಿಕಾ ಸೀಮೆ ಎಣ್ಣೆ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಕಳೆದ ವರ್ಷ ಸೀಮೆ ಎಣ್ಣೆಯಿಲ್ಲದೇ ಹಲವಾರು ನಾಡದೋಣಿ ಮೀನುಗಾರರು ಸಂಕಷ್ಟದಲ್ಲಿದ್ದರು. ಮೀನುಗಾರಿಕೆಯನ್ನು ಮಾಡಲಾಗದ ಪರಿಸ್ಥಿತಿಯಲ್ಲಿ ಎನೂ ಮಾಡಲಾಗಿಲ್ಲ. ಎಲ್ಲವನ್ನು ಅರಿತ ನಾನು ಈ ಹಿಂದೆಯೇ ನೀಡಿದ ಭರವಸೆಯಂತೆ ಅಗಸ್ಟ್ ತಿಂಗಳಿನಿಂದಲೇ ಸೀಮೆ ಎಣ್ಣೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದೇನೆ. ಇಲ್ಲಿ ಸ್ವಲ್ಪ ಹಣ ಹೆಚ್ಚು ಎಂದು ಕಂಡು ಬಂದರೂ ಕೂಡಾ ಸೀಮೆ ಎಣ್ಣೆಯೇ ಇಲ್ಲಾದ್ದಕ್ಕಿಂತ ಇದು ಉತ್ತಮ. ಸರಕಾರದ ಮಟ್ಟದಲ್ಲಿ ದರ ಇಳಿದರೆ ನಾವು ನಿಮಗೆ ಕಡಿಮೆ ದರದಲ್ಲಿ ಪೂರೈಸುತ್ತೇವೆ ಎಂದ ಅವರು ಪ್ರತಿ ಲೀಟರ್‌ಗೆ ರೂ.35-00ರ ಸಬ್ಸಿಡಿ ಸರಕಾರ ನೀಡುತ್ತಿದೆ ಎಂದರು.

ರಾಜ್ಯದಲ್ಲಿ 8200 ಬೋಟುಗಳಿದ್ದು ಇವೆಲ್ಲವುಗಳಿಗೂ ರಿಯಾಯತಿ ದರದಲ್ಲಿ 10 ತಿಂಗಳ ಕಾಲ ತಲಾ 300 ಲೀಟರ್ ಸೀಮೆ ಎಣ್ಣೆ ವಿತರಿಸಲು ನಿರ್ಧರಿಸಲಾಗಿದೆ. ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕೈಗಾರಿಕೆಯಿಂದ ಸೀಮೆ ಎಣ್ಣೆ ಖರೀದಿಸಿ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ವಿತರಿಸಲಾಗುತ್ತಿದೆ. ಈ ಮಹತ್ವದ ಯೋಜನೆಗೆ 100 ಕೋಟಿ ರೂಪಾಯಿ ಬೇಕಾಗುತ್ತದೆ ಎಂದ ಹಿಂದಿನ ಬಿಜೆಪಿ ಸರಕಾರ ಮೀನುಗಾರರಿಗೆ ಸರಿಯಾದ ರೀತಿಯಲ್ಲಿ ಸೀಮೆಎಣ್ಣೆ ವಿತರಿಸಿರಲಿಲ್ಲ. 8200 ನಾಡದೋಣಿಗಳಿದ್ದರೂ ಕೇವಲ 4000 ದೋಣಿಗಳಿಗಷ್ಟೇ ಸೀಮೆ ಎಣ್ಣೆ ವಿತರಣೆ ಮಾಡುತ್ತಿತ್ತು. ಈ ಬಾರಿ ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ ಕೈಗಾರಿಕಾ ಸೀಮೆ ಎಣ್ಣೆಯನ್ನು ನಿರಂತರ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೀನುಗಾರರು ಹಲವು ಬೇಡಿಕೆಗಳನ್ನು ಇಟ್ಟಿದ್ದು ಅದನ್ನು ಹಂತಹಂತವಾಗಿ ಈಡೇರಿಸುತ್ತೇನೆ. ಅಳ್ವೆಕೋಡಿ-ತೆಂಗಿನಗುಂಡಿ ಬಂದರು ಅಭಿವೃದ್ಧಿಗೆ 100 ಕೋಟಿ ರೂಪಾಯಿಯ ಅನುದಾನದ ಅಗತ್ಯವಿದ್ದು ಮಂಜೂರಿ ಮಾಡಿಸುತ್ತೇನೆ. ತೆಂಗಿನಗುಂಡಿಯಲ್ಲಿ ಮಹಿಳೆಯರು ಮೀನುಗಾರಿಕಾ ಶೆಡ್ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದು, ಇದೂ ಸೇರಿದಂತೆ ಜಟ್ಟಿ ನಿರ್ಮಾಣದಂತಹ ಅಗತ್ಯ ಕಾಮಗಾರಿಗಳನ್ನು ಮಾಡಿಸಿಕೊಡುವ ಭರವಸೆ ನೀಡಿದರು.

Advertisement

ಅಳ್ವೇಕೋಡಿ-ತೆಂಗಿನಗುಂಡಿ ನಡುವೆ ಸೇತುವೆ ನಿರ್ಮಾಣಕ್ಕೆ42 ಕೋಟಿ ರೂಪಾಯಿ ಮಂಜೂರಾಗಿದ್ದು ಈ ಹಿಂದಿನ ಅವಧಿಯಲ್ಲಿ ವಾಪಾಸು ಹೋಗಿದ್ದು ಯಾಕೆ ಹೋಗಿದೆ ಎನ್ನುವ ಕುರಿತು ಸ್ಥಳೀಯರಿಗೆ ತಿಳಿದಿದೆ ಎಂದು ಮಂಜೂರಾದ ಸೇತುವೆ ಮಾಡಿಸದ ಬಿ.ಜೆ.ಪಿ. ಶಾಸಕ ಸುನಿಲ್ ನಾಯ್ಕ ಅವರಿಗೆ ಟಾಂಗ್ ನೀಡಿದರು.

ಮೀನುಗಾರ ಮುಖಂಡರಾದ ಸೋಮನಾಥ ಮೊಗೇರ, ಕೇಶವ ಮೊಗೇರ, ಶಂಕರ ಹೆಬ್ಳೆ ಮೀನುಗಾರರರಿಗೆ ಕೈಗಾರಿಕೆ ಸೀಮೆ ಎಣ್ಣೆ ವಿತರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಮೀನುಗಾರರ ಸಮಸ್ಯೆ ಬಗೆ ಹರಿಸಿಕೊಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ತಹಸೀಲ್ದಾರ್ ತಿಪ್ಪೇಸ್ವಾಮಿ, ಮೀನುಗಾರಿಕಾ ಜಂಟಿ ನಿರ್ದೇಶಕ ವಿವೇಕ ಆರ್., ಕ.ಮೀ.ಅಭಿವೃದ್ಧಿ ನಿಗಮದ ನಿರ್ದೇಶಕ ಮಹೇಶ ಕುಮಾರ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ಕುಮಾರ, ಜಟಕಾ ಮೊಗೇರ, ವಿಠ್ಠಲ್ ದೈಮನೆ, ಅಬ್ದುಲ್ ಮಜೀದ್ ಇಬ್ಬು, ಕ.ಮೀ.ಅಭಿವೃದ್ಧಿ ನಿಗಮದ ನಿರ್ದೇಶಕ ಮಹೇಶ ಕುಮಾರ, ಸೋಮನಾಥ ಎಂ. ಮೊಗೇರ, ಅಶ್ವಿನಿ ನಾಗರಾಜ ಮೊಗೇರ, ಮಾರುತಿ ಸಂಕಯ್ಯ ಮೊಗೇರ, ಮುಂತಾದವರಿದ್ದರು.

ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಗಣೇಶ ಪ್ರಾಸ್ತಾವಿಕ ಮಾತನಾಡಿದರು. ಕುಪ್ಪ ಮೊಗೇರ ಪ್ರಾರ್ಥಿಸಿದರು. ಜಿಲ್ಲಾ ಮೀನುಗಾರಿಕಾ ಉಪನಿರ್ದೇಶಕ ಪವಿನ್ ಬೋಪಣ್ಣ ಸ್ವಾಗತಿಸಿದರು. ಸಂಜನಾ ನಾಗರಾಜ ಮೊಗೇರ ನಿರೂಪಿಸಿದರು.

ನಿರ್ದಾಕ್ಷಿಣ್ಯವಾಗಿ ಕ್ರಮ

ನಾನು ಜನ ಸಾಮಾನ್ಯರ ಮಂತ್ರಿಯಾಗಿದ್ದು ಜನರು ನೇರವಾಗಿ ನನ್ನ ಹತ್ತಿರ ಬಂದು ಮಾತನಾಡುತ್ತಾರೆ. ಯಾವುದೇ ಕಚೇರಿಯಲ್ಲಿ ಜನರಿಗೆ ಗೌರವ ನೀಡದಿದ್ದರೆ, ಕಚೇರಿಗೆ ಜನರು ಬಂದಾಗ ಕೂರಿಸಿ, ಮಾತನಾಡಿಸಿ ಅವರ ಕೆಲಸವನ್ನು ಮಾಡಿಕೊಡದೇ ಇದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಂಕಾಳ ವೈದ್ಯ ಹೇಳಿದರು.

ಭಟ್ಕಳ ತಾಲೂಕು ಪಂಚಾಯತ್ ಸಭಾ ಭವನದಲ್ಲಿ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ, ಅಧಿಕಾರಿಗಳು ಯಾವುದೇ ರೀತಿಯ ದೂರು ಬರದಂತೆ ನೋಡಿಕೊಂಡು ಕಚೇರಿಗೆ ಆಗಮಿಸುವ ಜನತೆಗೆ ಸೂಕ್ತವಾಗಿ ಸ್ಪಂದಿಸಿ ತ್ವರಿತವಾಗಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ನಾನು ಯಾವುದೇ ಸಂದರ್ಭದಲ್ಲೂ ಕಚೇರಿಗಳಿಗೆ ಭೇಟಿ ನೀಡಬಹುದು. ಆಗ ಅಲ್ಲಿ ಕಡತಗಳು ವಿಲೇವಾರಿಯಾಗದೇ ಇದ್ದಿದ್ದನ್ನು ನೋಡಿದರೆ ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಜನರ ಕೆಲಸ ಆಗಲಿಲ್ಲ ಎಂದು ದೂರು ಕೇಳಿ ಬಂದಲ್ಲಿ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next