Advertisement

KERC ಒಂದು ಶಾಕ್‌; ಎಸ್ಕಾಂಗಳ ಡಬಲ್‌ ಶಾಕ್‌

10:52 PM Jun 13, 2023 | Team Udayavani |

ಬೆಂಗಳೂರು: “ಗೃಹ ಜ್ಯೋತಿ” ಅಡಿ ಶೂನ್ಯ ಬಿಲ್‌ ಅನ್ನು ಎದುರು ನೋಡುತ್ತಿರುವ ಗ್ರಾಹಕರಿಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಈಚೆಗೆ ಇಂಧನ ದರ ಹೊಂದಾಣಿಕೆ ವೆಚ್ಚದ ರೂಪದಲ್ಲಿ ಒಂದು “ಶಾಕ್‌” ನೀಡಿದರೆ, ಅದನ್ನು ಅನುಷ್ಠಾನಗೊಳಿಸುವ ನೆಪದಲ್ಲಿ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು “ಡಬಲ್‌ ಶಾಕ್‌” ನೀಡಿವೆ!

Advertisement

ಕೆಇಆರ್‌ಸಿ ಇಂಧನ ದರ ಹೊಂದಾಣಿಕೆ ವೆಚ್ಚ (ಎಫ್ಎಸಿ)ಕ್ಕೆ ಅನುಕೂಲವಾಗುವಂತೆ ಪ್ರತೀ ಯೂನಿಟ್‌ಗೆ 33ರಿಂದ 51 ಪೈಸೆ ಹೆಚ್ಚಳ ಮಾಡಿ ಈಚೆಗೆ ಆದೇಶ ಹೊರಡಿಸಿದೆ. ಎಪ್ರಿಲ್‌-ಜೂನ್‌ ಅವಧಿಗೆ ಅನ್ವಯವಾಗುವ ಈ ದರವನ್ನು ಡಿಸೆಂಬರ್‌ವರೆಗೆ ಸಂಗ್ರಹಿಸಲು ಅವಕಾಶ ಕಲ್ಪಿಸಿದೆ. ಆದರೆ, ಎಸ್ಕಾಂಗಳು ಏಕಕಾಲದಲ್ಲಿ ಎಪ್ರಿಲ್‌ ಮತ್ತು ಮೇ ತಿಂಗಳ ಬಾಕಿಯನ್ನು ಒಟ್ಟಿಗೆ ಸಂಗ್ರಹಿಸುವುದರ ಜತೆಗೆ ಚುನಾವಣ ನೀತಿ ಸಂಹಿತೆ ಸಂದರ್ಭದಲ್ಲಿನ ಎಫ್ಎಸಿ ಕೂಡ ವಸೂಲು ಮಾಡಲು ಮುಂದಾಗಿವೆ. ಪರಿಣಾಮ ಗ್ರಾಹಕರಿಗೆ ಭಾರೀ ಹೊರೆ ಬೀಳುತ್ತಿದೆ.

ವಾರ್ಷಿಕ ಪರಿಷ್ಕರಣೆ ಪ್ರತೀ ಯೂನಿಟ್‌ಗೆ ಸರಾಸರಿ 70 ಪೈಸೆ ಆಗಿದೆ. ಇದೂ ಎಪ್ರಿಲ್‌ನಿಂದ ಪೂರ್ವಾನ್ವಯ ಆಗುವಂತೆ ಆದೇಶ ಮಾಡಲಾಗಿದೆ. ಎಫ್ಎಸಿ ಮತ್ತು ವಾರ್ಷಿಕ ಪರಿಷ್ಕರಣೆ ಎರಡನ್ನೂ ಲೆಕ್ಕಹಾಕಿದರೆ, ಮಾಸಿಕ ಪ್ರತಿ ಯೂನಿಟ್‌ಗೆ 1.20 ರೂ. ಆಗುತ್ತದೆ. ಎಪ್ರಿಲ್‌ ಮತ್ತು ಮೇ ಎರಡೂ ತೆಗೆದುಕೊಂಡಾಗ 2.40 ರೂ. ಆಗುತ್ತದೆ. ಜತೆಗೆ ಫೆಬ್ರವರಿ ಮತ್ತು ಮಾರ್ಚ್‌ನ ಎಫ್ಎಸಿ ಕೂಡ ಸೇರಿಸಲಾಗಿದೆ. ಈ ಒಟ್ಟಾರೆ ಮೊತ್ತಕ್ಕೆ ತೆರಿಗೆ ವಿಧಿಸಿ ಬಿಲ್‌ ನೀಡಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ ಗೃಹ ಬಳಕೆದಾರರ ವಿದ್ಯುತ್‌ ಬಳಕೆ ಶುಲ್ಕವನ್ನು ಕೆಇಆರ್‌ಸಿ ಮೂರು ಹಂತಗಳಿಂದ ಎರಡು ಹಂತಗಳಿಗೆ ಸೀಮಿತಗೊಳಿಸಿದ್ದು, 0-100 ಯೂನಿಟ್‌ ಪ್ರತೀ ಯೂನಿಟ್‌ಗೆ 4.75 ರೂ. ಹಾಗೂ 100ಕ್ಕಿಂತ ಮೇಲ್ಪಟ್ಟರೆ ಒಟ್ಟಾರೆ ಬಳಕೆಯಾದ ಪ್ರತೀ ಯೂನಿಟ್‌ಗೆ 7 ರೂ. ವಿಧಿಸಲು ಅನುಮತಿಸಿದೆ. ಹೀಗಾಗಿ ಗ್ರಾಹಕರಿಗೆ ಸಾವಿರಾರು ರೂ. ಬಿಲ್‌ ಬರುತ್ತಿದೆ ಎನ್ನಲಾಗುತ್ತಿದೆ.

ನಿಯಮದಲ್ಲಿ ಇಲ್ಲದಿದ್ರೂ ಸಂಗ್ರಹ?
ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕವನ್ನು ತಿದ್ದುಪಡಿಗೆ ಕೆಇಆರ್‌ಸಿ 2023ರ ಫೆಬ್ರವರಿಯಲ್ಲಿ ಹೊರಡಿಸಿರುವ ಅಧಿಸೂಚನೆಯನ್ವಯ ತಿಂಗಳ ಅಂತರದಲ್ಲೇ ಎಫ್ಎಸಿ ಸಂಗ್ರಹಿಸತಕ್ಕದ್ದು. ಉದಾಹರಣೆಗೆ ಎಪ್ರಿಲ್‌ ವೆಚ್ಚವನ್ನು ಜೂನ್‌ ಹಾಗೂ ಮೇನಲ್ಲಿಯ ಹೊಂದಾಣಿಕೆ ವೆಚ್ಚವನ್ನು ಜುಲೈನಲ್ಲೇ ಸಂಗ್ರಹಿಸಲು ಅವಕಾಶವಿದೆ. ಈ ಬಾರಿಯ ಬಿಲ್‌ನಲ್ಲಿ ಹಿಂದಿನ ಬಾಕಿ ಸೇರಿಸಲಾಗಿದೆ ಎಂಬ ಆರೋಪವಿದೆ.

ಬಿಲ್‌ ಸಂಗ್ರಹ ಕ್ರಮಬದ್ಧ
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಬೆಸ್ಕಾಂ ನಿರ್ದೇಶಕ (ಹಣಕಾಸು) ದರ್ಶನ್‌, ಬೆಸ್ಕಾಂನಲ್ಲಿ ಕ್ರಮಬದ್ಧವಾಗಿಯೇ ಬಿಲ್‌ ಸಂಗ್ರಹಿಸಲಾಗುತ್ತಿದೆ. ಬೇಕಾಬಿಟ್ಟಿ ಬಿಲ್‌ ನೀಡಿ, ಮೊತ್ತ ಸಂಗ್ರಹಿಸುತ್ತಿರುವ ಬಗ್ಗೆ ಯಾವುದೇ ದೂರುಗಳಿಲ್ಲ. ಅಂತಹ ಮಾಹಿತಿ ಅಥವಾ ದೂರುಗಳು ಬಂದರೆ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

Advertisement

1 ಯೂನಿಟ್‌ಗೆ 13 ರೂ.!
ಗೃಹ ಬಳಕೆದಾರರಿಗೆ ಒಂದು ಯೂನಿಟ್‌ ವಿದ್ಯುತ್‌ಗೆ ವಿಧಿಸುತ್ತಿರುವ ದರ ಅಂದಾಜು 13 ರೂ.! ಹೌದು, ಹೆಸ್ಕಾಂ ವ್ಯಾಪ್ತಿಯಲ್ಲಿ ಗ್ರಾಹಕರೊಬ್ಬರಿಗೆ ಮೇ ತಿಂಗಳ ಬಿಲ್‌ ಜೂನ್‌ನಲ್ಲಿ ನೀಡಲಾಗಿದೆ. ಅದರಂತೆ ಗ್ರಾಹಕ ಬಳಕೆ ಮಾಡಿದ್ದು 150 ಯೂನಿಟ್‌. ಬಿಲ್‌ ಮೊತ್ತ 1,996 ರೂ. ಅದನ್ನು ಲೆಕ್ಕಹಾಕಿದರೆ ಯೂನಿಟ್‌ಗೆ 13 ರೂ. ಆಗುತ್ತದೆ. ಇದರಲ್ಲಿ 3 ಕಿ.ವಾ. ಸಾಮರ್ಥ್ಯ ಇರುವುದರಿಂದ ನಿಗದಿತ ಶುಲ್ಕ 110 ರೂ.ಗಳಂತೆ 330 ರೂ. ಆಗುತ್ತದೆ. 150 ಯೂನಿಟ್‌ ಅನ್ನು ತಲಾ 7 ರೂ.ಗೆ ಲೆಕ್ಕಹಾಕಿದಾಗ, 1,050 ರೂ. ಹಾಗೂ ಯೂನಿಟ್‌ಗೆ 2.55 ರೂ. ಎಫ್ಎಸಿ ವಿಧಿಸಿದ್ದು, 150 ಯೂನಿಟ್‌ಗೆ 382 ರೂ., ಶೇ. 9ರಷ್ಟು ತೆರಿಗೆ ವಿಧಿಸಿದರೆ 94.50 ರೂ. ಆಗುತ್ತದೆ. ಬಾಕಿ 139 ರೂ. ಸೇರಿದಂತೆ ಒಟ್ಟಾರೆ 1,996 ರೂ. ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next