ಶ್ರೀರಂಗಪಟ್ಟಣ: ಕೇರಳದಲ್ಲಿ ನಿಷೇಧಿಸಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಕ್ರಮವಾಗಿ ಕರ್ನಾಟಕಕ್ಕೆ ಸಾಗಣೆ ಮಾಡುತ್ತಿದ್ದ ಕೇರಳ ರಾಜ್ಯಕ್ಕೆ ಸೇರಿರುವ ಕೆಎಲ್ 19, 2765 ನಂಬರಿನ 10 ಚಕ್ರದ ಲಾರಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಆಲೆಮನೆಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ: ತಾಲೂಕಿನ ಕಿರಂಗೂರು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಕೇರಳ ರಾಜ್ಯ ನಿಷೇಧ ಮಾಡಿರುವ ಪ್ಲಾಸ್ಟಿಕ್ ಚಪ್ಪಲಿ, ಕವರ್, ಮದ್ಯದ ಬಾಟಲ್, ನೀರಿನ ಬಾಟಲ್, ಬಟ್ಟೆ ಚೂರು ಸೇರಿದಂತೆ ಅನುಪಯುಕ್ತ ತ್ಯಾಜ್ಯ ತುಂಬಿದ ಲಾರಿಯನ್ನು ಜಪ್ತಿ ಮಾಡಿ ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದಾರೆ. ಕೇರಳ ರಾಜ್ಯದ ಅನುಪಯುಕ್ತ ತ್ಯಾಜ್ಯವನ್ನು ಕರ್ನಾಟಕ್ಕೆ ತಂದು ರಸ್ತೆ ಬದಿಗಳಲ್ಲಿ ಬಿಸಾಡಿ, ಆಲೆ ಮನೆಗಳಿಗೆ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಲೆಮನೆಗಳಲ್ಲಿ ರಚ್ಚಿನ ಬದಲು ತ್ಯಾಜ್ಯ ಬಳಕೆ: ಆಲೆ ಮನೆಗಳಲ್ಲಿ ಬೆಲ್ಲ ತಯಾರಿಸುವ ಒಲೆಗಳಿಗೆ ರಚ್ಚಿನ ಬದಲು ಈ ಪ್ಲಾಸ್ಟಿಕ್ ತ್ಯಾಜ್ಯ ಬಳಸಲಾಗುತ್ತಿದೆ. ಇದರಿಂದ ಅಧಿಕ ಪ್ರಮಾಣದ ರಾಸಾಯನಿಕ ಮಿಶ್ರಿತ ಕೆಟ್ಟ ಹೊಗೆ ಹೊರಬರುತ್ತಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶ ವಾಯುಮಾಲಿನ್ಯವಾಗುತ್ತಿದ್ದು, ಸಾರ್ವಜ ನಿಕರ ಉಸಿರಾಟಕ್ಕೆ ಹಾಗೂ ಪರಿಸರಕ್ಕೆ ಹಾನಿಕರವಾಗಿದೆ. ನೆರೆ ರಾಜ್ಯದ ತ್ಯಾಜ್ಯಗಳನ್ನು ತಂದು ನಮ್ಮ ರಾಜ್ಯದ ನೈರ್ಮಲ್ಯ ಹಾಳು ಮಾಡುತ್ತಿರುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಲಾರಿ ವಶಕ್ಕೆ, ದೂರು ದಾಖಲು: ಅಕ್ರಮವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಗಣೆ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿ ಕೊಂಡಿದ್ದು, ಶ್ರೀರಂಗಪಟ್ಟಣ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪೊಲೀಸರ ವಶದಲ್ಲಿದ್ದ ಲಾರಿ ಮತ್ತು ಚಾಲಕರಿಂದ ಮಾಹಿತಿ ಪಡೆದು, ಕರ್ನಾಟಕಕ್ಕೆ ತರುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಪರಿಶೀಲನೆ ನಡೆಸಿ, ಇಲ್ಲಿನ ಜಿಲ್ಲೆಯ ಆಲೆಮನೆಯೊಂದಿಗೆ ಸಂಪರ್ಕ ವಿಟ್ಟುಕೊಂಡು ತ್ಯಾಜ್ಯ ರವಾನೆ ಹಾಗೂ ತೆಗೆದುಕೊಂಡು ಹೋಗುತ್ತಿರುವುದಾಗಿ ಮಾಹಿತಿ ಪಡೆದುಕೊಂಡು ನಂತರ ಸಾರ್ವಜನಿಕರ ದೂರಿನನ್ವಯ ಪೊಲೀಸರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಿಗಾವಹಿಸಲು ಅಧಿಕಾರಿಗಳಿಗೆ ಆದೇಶ: ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳಿಗೆ ಇಂತಹ ತ್ಯಾಜ್ಯ ಬಳಸುವ ಪ್ರದೇಶಗಳ ಮೇಲೇ ನಿಗಾ ವಹಿ ಸಲು ಈಗಾಗಲೇ ತಿಳಿಸಲಾಗಿದೆ. ಕಾನೂನು ಬಾಹಿರ ವಾಗಿ ತ್ಯಾಜ್ಯಗಳನ್ನು ಸಾಗಾಟ ಮಾಡುವರ ವಿರುದ್ಧ ಕ್ರಮಕ್ಕೆ ಈಗಾಗಲೇ ಠಾಣೆಗೆ ದೂರು ನೀಡಲಾಗಿದೆ ಎಂದು ಪರಿಸರ ಮಾಲೀನ್ಯ ನಿಯಂತ್ರಣ ಸಹಾಯಕ ಅಧಿಕಾರಿ ಅಶ್ವಿನಿ ತಿಳಿಸಿದ್ದಾರೆ.
ದಂಧೆ ಮಾಡಿಕೊಂಡಿರುವ ಮಧ್ಯವರ್ತಿಗಳು : ಪ್ರತಿನಿತ್ಯ ಹತ್ತಾರು ಲಾರಿಗಳ ಮೂಲಕ ಕೇರಳದ ಕಾರ್ಖಾನೆಗಳಲ್ಲಿ ಬಳಸಿ, ಬಿಸಾಡುವ ಅನುಪಯುಕ್ತ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಲು ಹಲವು ಮಧ್ಯವರ್ತಿ ಗಳು ಈ ದಂಧೆಯಲ್ಲಿ ತೊಡಗಿದ್ದಾರೆ. ಮಧ್ಯವರ್ತಿಗಳು ತಮ್ಮ ರಾಜ್ಯದಲ್ಲಿ ನಿಷೇಧವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಕರ್ನಾಟಕಕ್ಕೆ ಸಾಗಿಸಲು ಲಾರಿಗಳಿಗೆ ದುಪ್ಪಟ್ಟುಬಾಡಿಗೆ ನೀಡಿ ಕಳುಹಿಸುತ್ತಿದ್ದಾರೆ.ಇಲ್ಲಿಗೆ ತಂದ ಲಾರಿ ಮಾಲೀಕರು ಹಾಗೂ ಚಾಲಕರು, ಹೆದ್ದಾರಿ, ರಸ್ತೆಗಳ ಪಕ್ಕ ಹಾಗೂ ಆಲೆ ಮನೆಗಳಿಗೆ ಸಾಗಾಣೆ ಮಾಡಿ ಪರಿಸರ ಹಾಳುಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೊರ ರಾಜ್ಯ ಕೇರಳದಿಂದ ಪ್ರತಿ ನಿತ್ಯ ಲಾರಿಗಳ ಮೂಲಕ ತ್ಯಾಜ್ಯ ತಂದು ಸುರಿಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಕಾನೂನು ಬಾಹಿರವಾಗಿದ್ದು, ಅಂತಹವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.
–ಕೃಷ್ಣಪ್ಪ, ಸರ್ಕಲ್ ಇನ್‌ಸ್ಪೆಕ್ಟರ್