ಕಾಸರಗೋಡು: ಕೇರಳದ ಒಟ್ಟು ಭೂ ಪ್ರದೇಶದ ಶೇ.13ರಷ್ಟು ಭಾಗ ತೀವ್ರ ಭೂಕುಸಿತ ಸಾಧ್ಯತಾ ವಲಯಲ್ಲಿದೆ ಎಂದು ತಜ್ಞರ ತಂಡ ನಡೆಸಿದ ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಕುಪೋಸ್ ಪುದುವೈಪ್ ಕ್ಯಾಂಪಸ್‌ನ ಮುಖ್ಯಸ್ಥ ಡಾ| ಗಿರೀಶ್ ಗೋಪಿ ಹಾಗೂ ಕುಪೋಸ್ ಭೂ ಕುಸಿತ ವಿಭಾಗದ ಸಂಶೋಧಕ ಪಿ.ಎಲ್.ಅಚ್ಚು ಅವರನ್ನೊಳಗೊಂಡ ಅಧ್ಯಯನ ಸಮಿತಿ ತಯಾರಿಸಿದ ವರದಿಯಲ್ಲಿ ಈ ಆತಂಕಕಾರಿ ಮಾಹಿತಿಯಿದೆ.
2018ರಲ್ಲಿ ರಾಜ್ಯದ ಹಲವೆಡೆ ಉಂಟಾದ ಮಹಾ ಪ್ರವಾಹದ ಬಳಿಕ ತೀವ್ರ ಭೂಕುಸಿತ ಸಾಧ್ಯತಾ ವಿಸ್ತೀರ್ಣದಲ್ಲಿ ಶೇ.3.46ರಷ್ಟು ಹೆಚ್ಚಳ ಉಂಟಾಗಿದೆ. ವಯನಾಡು ಜಿಲ್ಲೆಯಲ್ಲಿ ಶೇ. 14ರಷ್ಟು ಭೂಪ್ರದೇಶ ಭೂಕುಸಿತದ ಸಾಧ್ಯತಾ ವಲಯದಲ್ಲಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
ಭೂಕುಸಿತದ ಬಗ್ಗೆ ಪೂರ್ವ ಮುನ್ನೆಚ್ಚರಿಕೆ ನೀಡಲು ಆಟೋಮೇಟೆಡ್ ಹವಾಮಾನ ವರದಿ ಸ್ಟೇಷನ್‌ಗಳಲ್ಲಿ ಪ್ರತಿ 5ರಿಂದ 10 ನಿಮಿಷಗಳ ಅಂತರದಲ್ಲಿ ಮಳೆ ಕುರಿತಾದ ಡಾಟಾ, ಭೂಮಿ ಹೊಂದಿರುವ ನೀರಿನ ಅಂಶಗಳ ವಿವಿಧ ಕೋನಗಳು, ಮಳೆ ಸುರಿಯುವ ಬಗ್ಗೆ ರಾಡಾರ್, ಆಧುನಿಕ ಪೂರ್ವ ಮಾಹಿತಿ ಇತ್ಯಾದಿ ಸೌಕರ್ಯಗಳು ಅತ್ಯಗತ್ಯವಾಗಿವೆ.
ಎಸ್.ಎಂ.ಎಸ್. ಆಧಾರಿತ ತತ್‌ಕ್ಷಣ ಹಾಗೂ ಸಕಾಲಿಕ ಮುನ್ನೆಚ್ಚರಿಕೆ ವ್ಯವಸ್ಥೆ ಕೇರಳಕ್ಕೆ ಅನಿವಾರ್ಯವಾಗಿದೆ ಎಂದು ವರದಿ ತಿಳಿಸಿದೆ.