ತ್ರಿಶೂರ್: ರಹಸ್ಯ ಮಹಡಿಗಳಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿಯ ಮೂಲಕ ಕೇರಳದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ಖ್ಯಾತಿ ಗಳಿಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ಕೇರಳದ ಮತ್ತೂಂದು ದೇವಾಲಯವು “ಭಾರೀ ಆಸ್ತಿ’ಯ ಕಾರಣಕ್ಕೆ ಸುದ್ದಿಯಾಗಿದೆ. ಅದು ಬೇರಾವ ದೇಗುಲವೂ ಅಲ್ಲ, ತ್ರಿಶೂರ್‌ನಲ್ಲಿರುವ ಗುರುವಾಯೂರು ಶ್ರೀ ಕೃಷ್ಣ ದೇವಾಲಯ.
ಗುರುವಾಯೂರು ದೇಗುಲವು 1,737.04 ಕೋಟಿ ರೂ. ಬ್ಯಾಂಕ್ ಠೇವಣಿಯನ್ನು ಹೊಂದಿದ್ದು, ದೇಗುಲದ ಹೆಸರಲ್ಲಿ 271.05 ಎಕರೆ ಭೂಮಿಯೂ ಇದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಯಿಂದ ತಿಳಿದುಬಂದಿದೆ. ಅಷ್ಟೇ ಅಲ್ಲ, ಭಕ್ತಾದಿಗಳಿಂದ ಬಂದಿರುವ ಭಾರೀ ಪ್ರಮಾಣದ ಚಿನ್ನ, ಬೆಳ್ಳಿ, ಅಮೂಲ್ಯ ಹರಳುಗಳ ಸಂಗ್ರಹವನ್ನೂ ಹೊಂದಿದೆ. ಭದ್ರತೆಯ ಕಾರಣಕ್ಕಾಗಿ ದೇಗುಲದ ಆಡಳಿತ ಮಂಡಳಿ ಇವುಗಳ ಮಾಹಿತಿ ಮತ್ತು ಮೌಲ್ಯವನ್ನು ಬಹಿರಂಗಪಡಿಸಿಲ್ಲ.
“ಪ್ರಾಪರ್ ಚಾನೆಲ್’ ಎಂಬ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಗುರುವಾಯೂರು ನಿವಾಸಿ ಎಂ.ಕೆ.ಹರಿದಾಸ್ ಎಂಬುವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರವಾಗಿ ದೇಗುಲದ ಆಡಳಿತ ಮಂಡಳಿಯು ಈ ಎಲ್ಲ ವಿವರಗಳನ್ನು ನೀಡಿದೆ. “ದೇಗುಲದ ಆಡಳಿತ ಮಂಡಳಿಯ ಬಳಿ ಇಷ್ಟೊಂದು ಆಸ್ತಿಪಾಸ್ತಿ ಇರುವ ಹೊರತಾಗಿಯೂ ದೇವಾಲಯದ ಅಭಿವೃದ್ಧಿ ಮತ್ತು ಭಕ್ತಾದಿಗಳ ಅನುಕೂಲಕ್ಕಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಂಡಳಿಯು ಒಂದು ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದರೂ, ಅದರ ಸ್ಥಿತಿಯನ್ನು ಹೇಳತೀರದು’ ಎಂದು ಹರಿದಾಸ್ ಆರೋಪಿಸಿದ್ದಾರೆ. ಆದರೆ, ಈ ಆರೋಪಗಳಿಗೆ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದೇ ವೇಳೆ, 2016ರಲ್ಲಿ ಪಿಣರಾಯಿ ವಿಜಯನ್ ಸರ್ಕಾರಿ ಅಸ್ತಿತ್ವಕ್ಕೆ ಬಂದ ಬಳಿಕ ದೇಗುಲಕ್ಕೆ ಯಾವುದೇ ಹಣಕಾಸು ನೆರವು ಸರ್ಕಾರದ ಕಡೆಯಿಂದ ಬಂದಿಲ್ಲ ಎಂದೂ ದೇವಸ್ವಂ ತಿಳಿಸಿದೆ.