Advertisement

ಕ್ಷುಲ್ಲ‌ಕ ಕಾರಣಕ್ಕೆ ಕೇರಳ ಯುವಕನ ಕೊಲೆ

12:36 PM Oct 14, 2018 | |

ಬೆಂಗಳೂರು: ಕನ್ನಡ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಯುವಕನನ್ನು ಚಾಕುನಿಂದ ಇರಿದು ಹತ್ಯೆಗೈದು, ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಉಪ್ಪಾರಪೇಟೆ ಪೊಲೀಸ್‌ ಠಾಣೆ ವ್ಯಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಕೇರಳ ಮೂಲದ ಗೌತಮ್‌ ಕೃಷ್ಣ (25) ಹತ್ಯೆಯಾದ ಯುವಕ. ಈತನ ಸ್ನೇಹಿತ ವಿಶಾಕ್‌ ಎಂಬಾತನಿಗೂ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕೃತ್ಯವೆಸಗಿ ಪರಾರಿಯಾಗಿರುವ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದ್ದು, ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ಕೇರಳದ ಎರ್ನಾಕುಲಂನಲ್ಲಿ ಸ್ಯಾಮ್‌ಸಂಗ್‌ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಗೌತಮ್‌, ಐದು ದಿನಗಳ ಹಿಂದಷ್ಟೇ ಸ್ನೇಹಿತ ವಿಶಾಕ್‌ ಜತೆ ಬೆಂಗಳೂರಿಗೆ ಬಂದು ಹಲಸೂರು ಗೇಟ್‌ ಬಳಿಯ ಕೊರಿಯರ್‌ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದ. ಸಮೀಪದ ಕೊಠಡಿಯಲ್ಲಿ ವಾಸವಾಗಿದ್ದರು. ಶುಕ್ರವಾರವಷ್ಟೇ ಹಳೇ ಸಂಸ್ಥೆಯ ಸಂಬಳ ಕೈ ಸೇರಿತ್ತು.

ಇದೇ ಖುಷಿಯಲ್ಲಿದ್ದ ಗೌತಮ್‌ ಮತ್ತು ವಿಶಾಕ್‌ ಹಾಗೂ ಇತರೆ ಸ್ನೇಹಿತರು ಮೆಜೆಸ್ಟಿಕ್‌ ಬಳಿಯ ಹೋಟೆಲ್‌ವೊಂದರಲ್ಲಿ ಪಾರ್ಟಿ ಮಾಡಿದ್ದಾರೆ. ತಡರಾತ್ರಿ 1 ಗಂಟೆ ಸುಮಾರಿಗೆ ಪಾರ್ಟಿ ಮುಗಿದ ಬಳಿಕ ಸ್ನೇಹಿತರೆಲ್ಲ ತಮ್ಮ ತಮ್ಮ ಮನೆಗೆ ಹೋಗಿದ್ದಾರೆ. ಗೌತಮ್‌ ಮತ್ತು ವಿಶಾಕ್‌ ಕೆ.ಜಿ.ರಸ್ತೆ ಮಾರ್ಗವಾಗಿ ಕೊರಿಯರ್‌ ಸಂಸ್ಥೆ ಕಡೆ ನಡೆದು ಹೋಗುತ್ತಿದ್ದರು.

ಏಕಾಏಕಿ ಎದೆಗೇ ಇರಿದರು: ಕೊರಿಯರ್‌ ಸಂಸ್ಥೆಗೆ ಹೋಗುವ ಮಾರ್ಗ ಮಧ್ಯೆ ಗೌತಮ್‌ ಮತ್ತು ವಿಶಾಕ್‌ ರಸ್ತೆ ಸಂಪೂರ್ಣವಾಗಿ ಖಾಲಿಯಿದೆ ಸೆಲ್ಫಿ ಚೆನ್ನಾಗಿರುತ್ತದೆ ಎಂದು ಇಬ್ಬರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ದುಷ್ಕರ್ಮಿಗಳು, “ಏನ್‌ ಮಾಡ್ತಾ ಇದ್ದೀರ?’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಗೌತಮ್‌ ಮಲಯಾಳಂನಲ್ಲಿ ಉತ್ತರಿಸಿದ್ದಾನೆ.

Advertisement

ಕೂಡಲೇ ದ್ವಿಚಕ್ರ ವಾಹನದಿಂದ ಇಳಿದ ಆರೋಪಿಗಳು “ಕನ್ನಡ ಬರಲ್ವಾ?’ ಎಂದಿದ್ದಾರೆ. ಇಲ್ಲ ಎಂದು ತಲೆಯಾಡಿಸಿದ ಗೌತಮ್‌ ಎದೆ ಮತ್ತು ಕಾಲಿಗೆ ಏಕಾಏಕಿ ಚಾಕುವಿನಿಂದ ಇರಿದಿದ್ದಾರೆ. ಇದನ್ನು ತಡೆಯಲು ಹೋದ ವಿಶಾಕ್‌ ಮೇಲೂ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತ ಸ್ರಾವದಿಂದ ಬಿದ್ದಿದ್ದ ಗೌತಮ್‌ನನ್ನು ವಿಶಾಕ್‌, ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.

ಆದರೆ, ಮಾರ್ಗ ಮಧ್ಯೆಯೇ ಗೌತಮ್‌ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಉಪ್ಪಾರಪೇಟೆ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದು, ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಆರೋಪಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೇವಲ 1 ನಿಮಿಷದಲ್ಲಿಯೇ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗಾಗಿ ಎಸಿಪಿ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದೆ. ಗೌತಮ್‌ ಪೋಷಕರಿಗೂ ಮಾಹಿತಿ ನೀಡಲಾಗಿದೆ ಎಂದು ಡಿಸಿಪಿ ರವಿ ಡಿ. ಚೆನ್ನಣ್ಣನವರ್‌ ಹೇಳಿದರು. ಘಟನೆ ಖಂಡಿಸಿರುವ ಮಲೆಯಾಳಂ ಅಸೋಸಿಯೇಷನ್‌ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next